ಬೆಂಗಳೂರು: ಮುಂದಿನ ಬಜೆಟ್‌ನಲ್ಲಿ ರಾಜ್ಯದ ಪ್ರಗತಿಗೆ ಪೂರಕವಾದ ಹಾಗೂ ಎಲ್ಲ ವರ್ಗದವರಿಗೆ ಆರ್ಥಿಕ ನ್ಯಾಯ ಒದಗಿಸುವ, ರಾಜ್ಯದ ಅಭಿವೃದ್ದಿ ಬಿಂಬಿಸುವ ಮುನ್ನೋಟದ ಬಜೆಟ್ನನ್ನು ಮಂಡಿಸಲಿದ್ದೇವೆ ಎಂದು ಸಿಎಂ ವಿಧಾನಸಭೆಯಲ್ಲಿ ಘೋಷಿಸಿದರು.
ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ವೇಳೆ ನಡೆಯುತ್ತಿದ್ದ ಕಾಂಗ್ರೆಸ್‌ನ ಧರಣಿ, ಗದ್ದಲದ ನಡುವೆಯೇ ಸಿಎಂ ಮಾತನಾಡಿ, ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. ಕೋವಿಡ್‌ನ ಯಶಸ್ವಿ ನಿರ್ವಹಣೆ ನಡುವೆಯೇ ಅಭಿವೃದ್ಧಿ ಕಾರ್ಯಗಳಲ್ಲೂ ಮುಂದೆ ಸಾಗಿದೆ. ಹತ್ತು ಹಲವು ಯೋಜನೆಗಳ ಮೂಲಕ ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿದ್ದೇವೆ ಎಂದರು.
ರಾಜ್ಯಪಾಲರ ಭಾಷಣ ಹಿನ್ನೋಟ, ಮುನ್ನೋಟ ಇಲ್ಲ ಎಂದು ಪ್ರತಿಪಕ್ಷಗಳು ಟೀಕಿಸಿವೆ. ಹಿನ್ನೋಟ, ಸಾಧನೆಯನ್ನು ರಾಜ್ಯಪಾಲರ ಭಾಷಣದಲ್ಲಿ ಹೇಳಿದ್ದೇವೆ. ಮುನ್ನೋಟವನ್ನು ಬಜೆಟ್‌ನಲ್ಲಿ ಹೇಳುತ್ತೇನೆ. ಎಲ್ಲ ವರ್ಗದವರ ಆರ್ಥಿಕ ಸ್ಥಿತಿಗೆ ಬಲ ತುಂಬಿ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತಹ ಬಜೆಟ್ ಮಂಡಿಸಿ, ಭವಿಷ್ಯದ ಕರ್ನಾಟಕ ಹೇಗಿರುತ್ತದೆ ಎಂಬುದನ್ನು ಬಜೆಟ್‌ನಲ್ಲಿ ರೂಪಿಸುತ್ತಿದ್ದೇವೆ ಎಂದು ಹೇಳಿದರು.
ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಕಿಡಿ: ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲೇ ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆಗೆ ಕಾಂಗ್ರೆಸ್ ಪಕ್ಷ ಅಡ್ಡಿಯಾಗಿರುವುದು ನೋವಿನ ಸಂಗತಿ. ಪ್ರತಿಪಕ್ಷವಾಗಿ ಬೇಜವಾಬ್ದಾರಿಯಿಂದ ನಡೆದುಕೊಂಡಿರುವುದು, ಕಪ್ಪು ಚುಕ್ಕೆಯಾಗಿ ಉಳಿಯಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಸರ್ಕಾರದ ಸಾಧನೆಗಳ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡಿ, ಸಲಹೆಗಳನ್ನು ನೀಡದೇ ಈ ರೀತಿ ಧರಣಿ ನಡೆಸಿ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಜನ ಎಲ್ಲವನ್ನು ನೋಡುತ್ತಿದ್ದಾರೆ. ಸದನದ ಘನತೆ ಕಾಂಗ್ರೆಸ್ಗೆ ಇಲ್ಲ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ನವರು ಈ ರೀತಿ ವರ್ತಿಸಿದ್ದಾರೆ. ಬರುವ ದಿನಗಳಲ್ಲಿ ಜನರ ಬಳಿ ನಾವು ಹೋಗುತ್ತೇವೆ. ಜನರೇ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕೋವಿಡ್, ಪ್ರವಾಹದಂತಹ ಸಂಕಷ್ಟದ ಸ್ಥಿತಿಯಲ್ಲೂ ರಾಜ್ಯದ ಅಭಿವೃದ್ಧಿಗೆ ಎಲ್ಲಿಯೂ ಹಿನ್ನಡೆಯಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಆಡಳಿತ ಸುಧಾರಣೆಗೆ ಎರಡು ವರದಿಗಳನ್ನು ತೆಗೆದುಕೊಂಡಿದ್ದೇವೆ. ಉದ್ಯೋಗ ನೀತಿ, ಸೆಮಿಕಂಡಕ್ಟರ್ ನೀತಿಯಂತಹ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಸಹ ನಡೆಸಲಾಗುವುದು.
ಹೀಗೆ ನಮ್ಮ ಸರ್ಕಾರ ಹತ್ತು ಹಲವು ಪ್ರಗತಿಗೆ ಪೂರಕವಾದ ಯೋಜನೆಗಳನ್ನು ಜಾರಿ ಮಾಡಿದೆ. ಕೃಷಿ, ಉದ್ಯೋಗ, ಉದ್ಯಮ, ಸೇವೆ, ಪ್ರಗತಿ ನಮ್ಮ ಸರ್ಕಾರದ ಸಾಧನೆಗಳಾಗಿವೆ. ಈಗ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಮುನ್ನೋಟದಲ್ಲಿ ಉತ್ತಮವಾದ ಭವಿಷ್ಯ ಬರೆಯುತ್ತೇವೆ ಎಂದರು.
ಇದನ್ನೂ ಓದಿ: ಮಾರ್ಚ್ 4ಕ್ಕೆ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಲಿರುವ ಸಿಎಂ ಬೊಮ್ಮಾಯಿ
ಮೊದಲ ಕೋವಿಡ್ ಅಲೆ ಬಂದಾಗ ಹೊಸ ಸಮಸ್ಯೆ ಎದುರಾಗಿತ್ತು. ಅಂತಹ ಸಂದರ್ಭದಲ್ಲೂ ಯಡಿಯೂರಪ್ಪ ದೃತಿಗೆಡದೆ ಜನ ಜೀವವನ್ನು ಉಳಿಸಲು ವಿಶೇಷ ಕಾರ್ಯಪಡೆಯನ್ನು ರಚಿಸಿ ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಅನುದಾನ ಒದಗಿಸಿದರು. 50 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿತ್ತು.
ನಮ್ಮ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಬೆಡ್, ಔಷಧ, ವೆಂಟಿಲೇಟರ್, ಐಸಿಯು, ಐಸಿಯು ವೆಂಟಿಲೇಟರ್ ಬೆಡ್‍ಗಳು, ಕೋವಿಡ್ ಸೋಂಕಿತರಿಗೆ ಔಷಧಗಳು, ಆ್ಯಂಬುಲೆನ್ಸ್, ಮೃತಪಟ್ಟವರಿಗೆ ಉತ್ತಮ ರೀತಿಯಲ್ಲಿ ಶವ ಸಂಸ್ಕಾರ ನಡೆಸಿಕೊಟ್ಟ ಸರ್ಕಾರ ನಮ್ಮದು ಎಂದು ಹೇಳಿದರು.
ಎಲ್ಲ ಅಡೆತಡೆಗಳ ನಡುವೆಯೂ ನಾವು ಒಂದು ಮತ್ತು 2ನೇ ಕೋವಿಡ್ ಅಲೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆವು. ಮೂರನೇ ಅಲೆ ಬಂದರೂ ಸರ್ವಸನ್ನದ್ದರಾಗಿದ್ದೇವೆ. ಐಸಿಯು, ವೆಂಟಿಲೇಟರ್, ಐಸಿಯು, ಐಸಿಯು ವೆಂಟಿಲೇಟರ್ ಬೆಡ್‍ಗಳು, ಕೋವಿಡ್ ಸೋಂಕಿತರಿಗೆ ಔಷಧಗಳು, ಆ್ಯಂಬುಲೆನ್ಸ್ ಯಥೇಚ್ಛವಾಗಿ ಲಭ್ಯವಿದೆ. ಈಗ ಯಾವುದೇ ಆತಂಕವಿಲ್ಲ ಎಂದರು.
ಕೋವಿಡ್ ಪರಿಸ್ಥಿತಿ ಯಶಸ್ವಿಯಾಗಿ ನಿರ್ವಹಣೆ: ತಮ್ಮ ಜೀವದ ಹಂಗು ತೊರೆದು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆಯವರು ಕೈಜೋಡಿಸಿದ ಪರಿಣಾಮ ಕೋವಿಡ್ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆವು. ಇಂದು ನಾವು 1200 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದ್ದೇವೆ. ಈ ಸದನದ ಮೂಲಕ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಕೋವಿಡ್‍ನಿಂದ ಮೃತಪಟ್ಟವರಿಗೆ ರಾಜ್ಯ ಸರ್ಕಾರ ಒಂದು ಲಕ್ಷ, ಕೇಂದ್ರ 50 ಸಾವಿರ ಸೇರಿದಂತೆ ಒಂದೂವರೆ ಲಕ್ಷ ಹಣವನ್ನು, ಬಡವರು, ಶ್ರಮಿಕರು, ಗಾರ್ಮೆಂಟ್ ನೌಕರರು, ಹೂ ಮಾರಾಟಗಾರರು, ನೇಕಾರರು ಸೇರಿದಂತೆ ಪ್ರತಿಯೊಂದೂ ಸಮುದಾಯಕ್ಕೆ ನೀಡಲಾಗಿದೆ. ಇದರ ಜೊತೆಗೆ ವಿಶೇಷ ಆರ್ಥಿಕ ನೆರವು, ಫುಡ್‍ಕಿಟ್ ವಿತರಣೆ ಮಾಡಲಾಗಿದೆ. ಅತ್ಯುತ್ತಮವಾಗಿ ಕೋವಿಡ್ ನಿರ್ವಹಣೆ ಮಾಡಿದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು ಪ್ರಶಂಸಿಸಿದರು.
ಆರೋಗ್ಯದ ಸಮಸ್ಯೆ ಎದುರಾಗದಂತೆ ಮುಂಗಡವಾಗಿ ಪಡಿತರ ಧಾನ್ಯಗಳು ಹಾಗೂ ಫುಟ್ ಕಿಟ್ ಗಳನ್ನು ಸಹ ನೀಡಲಾಗಿದೆ. ರಾಜ್ಯದಲ್ಲಿ ಪ್ರವಾಹ ಉಂಟಾದಾಗ ಎಲ್ಲ ಜಿಲ್ಲಾ ಕೇಂದ್ರಗಳಿಗೂ ಖುದ್ದು ಭೇಟಿ ಕೊಟ್ಟು ಪರಿಶೀಲಿಸಿದ್ದೇನೆ. ಎನ್‍ಡಿಆರ್ ಎಫ್‍ನ ಮಾರ್ಗಸೂಚಿಯನ್ನು ಬದಿಗೊತ್ತಿ ಮಳೆಯಾಶ್ರಿತ ಬೆಳೆಗಳಿಗೆ ಒಂದು ಹೆಕ್ಟೇರ್ 6,800 ರಿಂದ 13,600 ಒದಗಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಒಟ್ಟು 1,262 ಕೋಟಿ ರೈತರ ಖಾತೆಗೆ ಪರಿಹಾರವನ್ನು ಜಮೆ ಮಾಡಲಾಗಿದೆ. ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು 500 ಕೋಟಿ, ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಈವರೆಗೆ 1,180 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ರೈತರ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆ: ದೇಶದಲ್ಲಿ ಮೊದಲ ಬಾರಿಗೆ ರೈತರ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆಯನ್ನು ಆರಂಭಿಸಿದೆವು. ಸುಮಾರು 4.5 ಲಕ್ಷ ಮಕ್ಕಳು ಇದರ ಲಾಭ ಪಡೆದಿದ್ದಾರೆ ಎಂದು ವಿವರಿಸಿದರು.
ಕರ್ನಾಟಕ ದೇಶದಲ್ಲೇ ವಿದೇಶಿ ನೇರ ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನ ಅಭಿವೃದ್ಧಿಗೆ 6 ಸಾವಿರ ಕೋಟಿ, ಸ್ಥಳೀಯ ಸಂಸ್ಥೆಗಳ ಅಭಿವೃದ್ದಿಗೆ 3,357 ಕೋಟಿ ಅನುದಾನವನ್ನು ಒದಗಿಸಿದ್ದೇವೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ವಿಶೇಷ ಕಾರ್ಯಕ್ರಮಗಳು, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿದ್ಯಾರ್ಥಿ ವೇತನವನ್ನು ಹೆಚ್ಚಳ ಮಾಡಲಾಗಿದೆ. ಸ್ತ್ರೀ ಶಕ್ತಿ ಸಂಘಟನೆಗಳಿಗೂ ಸಹ ಅನುದಾನ ಹೆಚ್ಚಳ ಮಾಡಲಾಗಿದೆ.
ರಾಜ್ಯಾದ್ಯಂತ ಒಟ್ಟು 5 ಲಕ್ಷ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ನಗರ ಪ್ರದೇಶಗಳಲ್ಲಿ 1 ಲಕ್ಷ ಹಾಗೂ ಗ್ರಾಮೀಣಾ ಪ್ರದೇಶಗಳಲ್ಲಿ 4 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು. ಅಮೃತ್ ಗ್ರಾಮ ಯೋಜನೆಯಡಿ ಗ್ರಾಮ-ಒನ್ ಯೋಜನೆ ಆರಂಭವಾಗಿದೆ. ಪ್ರತಿಯೊಂದು ಗ್ರಾಪಂಗಳಲ್ಲಿ ಸರ್ಕಾರದ ಒಟ್ಟು 100 ಸೇವೆಗಳು ಜನರಿಗೆ ಲಭ್ಯವಾಗಲಿದೆ. ಇದರಿಂದ ಭ್ರಷ್ಟಾಚಾರ ನಿರ್ಮೂಲನೆಯಾಗಿ ಜನರಿಗೆ ಇಲಾಖೆಯಿಂದ ಇಲಾಖೆಗೆ ಅಲೆಯುವ ಸಂಕಟ ತಪ್ಪುತ್ತದೆ. ಇದು ನಮ್ಮ ಸರ್ಕಾರದ ಸಾಧನೆ ಎಂದು ಹೇಳೀದರು.
ಇದನ್ನೂ ಓದಿ: ಸ್ವಾತಂತ್ರ್ಯ ತಂದು ಕೊಟ್ಟಿದ್ದೇ ಕಾಂಗ್ರೆಸ್ಸಿಗರು.. RSSನವರು ಬ್ರಿಟಿಷ್‌ರೊಂದಿಗೆ ಶಾಮೀಲಾಗಿದ್ದವರು .. ರಾಮಲಿಂಗ ರೆಡ್ಡಿ
ಪ್ರಧಾನಿಗಳ ಮಹತ್ವಾಕಾಂಕ್ಷಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಿದ ಮೊದಲ ರಾಜ್ಯ ಕರ್ನಾಟಕ. ಇದರಿಂದ ಪ್ರಾಥಮಿಕ ಮತ್ತು ಮಾಧ್ಯಮ ಶಿಕ್ಷಣ ನೀತಿಯಲ್ಲಿ ಅನೇಕ ಮಹತ್ವದ ಬದಲಾವಣೆಯಾಗಲಿದೆ. ಬಿಪಿಎಲ್ ಕಾರ್ಡ್ದಾರರಿಗೆ ನೀಡುತ್ತಿದ್ದ ಅಕ್ಕಿ ಪ್ರಮಾಣ ಹೆಚ್ಚಳ ಮಾಡಲಾಗಿದೆ. ಜೊತೆಗೆ ರಾಗಿ, ಜೋಳವನ್ನು ಸಹ ವಿತರಣೆ ಮಾಡಲಿದ್ದೇವೆ ಎಂದು ತಿಳಿಸಿದರು.
ರಸ್ತೆಗಳ ಸುಧಾರಣೆಗಾಗಿ ಲೋಕೋಪಯೋಗಿ ಇಲಾಖೆಗೆ 3,500 ಕೋಟಿ ಅನುದಾನ ಒದಗಿಸಿದ್ದೇವೆ. ಕುಡಿಯುವ ನೀರನ್ನು ಮನೆ ಮನೆಗೆ ಪೂರೈಸಲು ಸರ್ಕಾರ ಮುಂದಾಗಿದ್ದು, ಈಗಾಗಲೇ 11 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಸಿಕ್ಕಿದೆ ಎಂದರು.
ಪ್ರಾದೇಶಿಕ ಅಸಮತೋಲನ ನಿವಾರಿಸಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಘೋಷಣೆ ಮಾಡಿದ 3 ಸಾವಿರ ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ ಮೊದಲ ಸರ್ಕಾರ ನಮ್ಮದು. ಹೀಗೆ ನಮ್ಮ ಸರ್ಕಾರ ಕರ್ನಾಟಕವನ್ನು ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಗೊಳಿಸಲು ದಾಪುಗಾಲು ಇಟ್ಟಿದೆ ಎಂದು ಹೇಳಿದರು.