ಬೆಂಗಳೂರು: ಕೈಗಾರಿಕಾ ಉದ್ದೇಶಗಳಿಗಾಗಿ ಕೆಐಎಡಿಬಿ ಮೂಲಕ ಪಡೆದ ಜಮೀನನ್ನು ಬಳಕೆ ಮಾಡದಿದ್ದರೆ 15 ದಿನಗಳಲ್ಲಿ ನೋಟಿಸ್ ನೀಡಲಾಗುವುದು. ಒಂದು ವೇಳೆ ಅನ್ಯ ಉದ್ದೇಶಕ್ಕಾಗಿ ಬಳಸಿದ್ದರೆ ಹಿಂಪಡೆಯಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆ ನೀಡಿದರು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವ ಉದ್ದೇಶಕ್ಕೆ ಜಮೀನು ಪಡೆಯಲಾಗಿತ್ತೋ ಅದಕ್ಕೆ ಬಳಸಬೇಕು. ಒಂದು ವೇಳೆ ಬಳಕೆ ಮಾಡದಿದ್ದರೆ, 15 ದಿನದೊಳಗೆ ನೋಟಿಸ್ ನೀಡುತ್ತೇವೆ. ಕಳೆದೊಂದು ವಾರದಿಂದ ಕೆಲವರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆರಂಭವಾಗಿದೆ. 15 ದಿನದಲ್ಲಿ ಸಮರ್ಪಕ ಉತ್ತರ ಬಾರದಿದ್ದರೆ ಮತ್ತೊಂದು ನೋಟಿಸ್ ಕೊಡಲಾಗುವುದು. ಹಾಗೊಂದು ವೇಳೆ ಅದಕ್ಕೂ ಉತ್ತರ ನೀಡದಿದ್ದರೆ ನೀಡಿರುವ ಜಮೀನು ವಾಪಸ್ ಪಡೆಯಲಾಗುವುದು ಎಂದರು.
ಕೆಲವರು ಕೈಗಾರಿಕಾ ಉದ್ದೇಶಗಳಿಗಾಗಿ ಪಡೆದಿರುವ ಜಮೀನಿನಲ್ಲಿ ಶೇ100 ರಷ್ಟು ಕೆಲಸವನ್ನು ಪೂರ್ಣ ಮಾಡಿದ್ದಾರೆ. ಇನ್ನು ಕೆಲವರು ಶೇ. 20 ರಷ್ಟು ಮಾತ್ರ ಕೆಲಸ ಪ್ರಾರಂಭಿಸಿದ್ದಾರೆ. ರಾಜ್ಯದ ಯಾವ ಯಾವ ಕಡೆ ಜಮೀನನ್ನು ಖಾಲಿ ಬಿಡಲಾಗಿದೆ ಎಂಬುದರ ಬಗ್ಗೆ ಇಲಾಖೆ ವತಿಯಿಂದ ಸಮೀಕ್ಷೆ ನಡೆಸಲಾಗುವುದು. ಕೆಐಎಡಿಬಿಯಿಂದ ಜಮೀನು ಪಡೆದು ಖಾಲಿ ಬಿಟ್ಟಿರುವ ಪ್ರದೇಶಗಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಪೊಲೀಸರಿಗೆ ಪೋಸ್ಟ್‌ಮೆನ್ ಕೆಲಸ ತಪ್ಪಿಸುವ ಬಗ್ಗೆ ಚಿಂತನೆ ನಡೆದಿದೆ : ಗೃಹ ಸಚಿವ ಆರಗ ಜ್ಞಾನೇಂದ್ರ