ಬೆಂಗಳೂರು : ಲಾಕ್‌ಡೌನ್‌ನಿಂದಾಗಿ ಎರಡು ತಿಂಗಳಿಂದ ದೇವಸ್ಥಾನಗಳು ಬಂದ್ ಆಗಿದ್ದವು. ರಾಜ್ಯ ಸರ್ಕಾರ ಅನ್‌ಲಾಕ್ ಪ್ರಕ್ರಿಯೆಯ ಕೊನೆ ಹಂತದಲ್ಲಿ ದೇವಸ್ಥಾನ, ಮಾಲ್‌ಗಳನ್ನ ತೆರೆಯಲು ಅವಕಾಶ ನೀಡಿತ್ತು. ಈ ವಿನಾಯಿತಿ ನೀಡಿದ್ದೇ ತಡ ದೇವಸ್ಥಾನಗಳಿಗೆ ಭಕ್ತರ ದಂಡು ಹರಿದು ಬಂದಿದೆ.
ಇಂದು ಆಷಾಢ ಮಾಸದ ಮೊದಲ ಶುಕ್ರವಾರ ಹಾಗೂ ಅಮಾವಾಸ್ಯೆ. ಹೀಗಾಗಿ, ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಹಿಂದೂ ಸಂಪ್ರದಾಯದಲ್ಲಿ ಆಷಾಢ ಮಾಸದ ಮೊದಲ ಶುಕ್ರವಾರ ದೇವರ ದರ್ಶನ ಪಡೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಈ ದಿನದಂದು ಜನರು ದೇವರ ದರ್ಶನ ಪಡೆಯುತ್ತಾರೆ.
ಹೀಗಾಗಿ, ನಗರದ ಅಣ್ಣಮ್ಮ ದೇವಸ್ಥಾನ, ಬನಶಂಕರಿ ದೇವಸ್ಥಾನ ಸೇರಿದಂತೆ ನಗರದ ಬಹುತೇಕ ಎಲ್ಲಾ ದೇಗುಲಗಳು ಇಂದು ಭಕ್ತರಿಂದ ತುಂಬಿ ತುಳುಕುತ್ತಿದೆ. ಜತೆಗೆ ಇಂದು ಅಮವಾಸ್ಯೆಯಾದ ಕಾರಣ ಭಕ್ತರು ಕೋಳಿಗಳನ್ನು ದಾನ ನೀಡುತ್ತಿದ್ದಾರೆ.
ಇನ್ನು, ಸರ್ಕಾರ ನೀಡಿದ ಮಾರ್ಗಸೂಚಿಯಂತೆ ದೇಗುಲದ ಆಡಳಿತ ಮಂಡಳಿ ಕೋವಿಡ್ ನಿಯಮವನ್ನ ಪಾಲಿಸುತ್ತಿದ್ದಾರೆ. ಹಾಗೂ ಭಕ್ತರು ಮಾಸ್ಕ್ ಧರಿಸಿ ದೇವಸ್ಥಾನಕ್ಕೆ ಆಗಮಿಸಿದ್ದಾರೆ.
ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧ.. ದೇಗುಲ ಸಂಪರ್ಕಿಸುವ ಎಲ್ಲಾ ಮಾರ್ಗಗಳು ಬಂದ್!