ಬೆಂಗಳೂರು: ಕಿಟಕಿ ಕಂಬಿ ಮುರಿದು ಕ್ಲಾಸ್ ರೂಮ್ ಗೆ ರಾತ್ರೋರಾತ್ರಿ ನುಗ್ಗಿದ ಪುಂಡರು ಕುರ್ಚಿ, ಮೇಜು ಸೇರಿದಂತೆ ಪೀಠೋಪಕರಣಗಳನ್ನು ಸುಟ್ಟು ಧ್ವಂಸ ಮಾಡಿರುವ ಘಟನೆ ಬ್ಯಾಡರಹಳ್ಳಿ-ಹೊಸಹಳ್ಳಿಯ ಗೊಲ್ಲರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಕೋವಿಡ್ ಹಿನ್ನೆಲೆಯಲ್ಲಿ ಅನಿರ್ಧಿಷ್ಟಾವಧಿ ಅವಧಿಯವರೆಗೂ ವಿದ್ಯಾರ್ಥಿಗಳಿಗೆ ರಜೆ ಇದ್ದಿದ್ದರಿಂದ ಶಾಲೆಯ ಬಹುತೇಕ ಕೊಠಡಿಗಳಿಗೆ ಸಂಪೂರ್ಣ ಬೀಗ ಹಾಕಲಾಗಿತ್ತು. ಶಿಕ್ಷಕರು ವರ್ಕ್ ಫ್ರಮ್ ಹೋಮ್ ನಲ್ಲಿ ಕೆಲಸ ಮಾಡುತ್ತಿದ್ದರಿಂದ ಶಾಲೆ ಕಡೆ ಯಾರೂ ಸುಳಿದಾಡುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ರಾತ್ರಿ ಶಾಲಾ ಕೊಠಡಿಯ ಹಿಂಬದಿಯಿಂದ ಕಿಟಕಿಯ ಸರಳುಗಳನ್ನು ಮುರಿದು ಒಳ ಪ್ರವೇಶಿಸಿದ್ದಾರೆ. ಬಳಿಕ ಮೇಜು, ಕುರ್ಚಿಗಳನ್ನು ಸಂಪೂರ್ಣವಾಗಿ ಸುಟ್ಟು ಕರಕಲು ಮಾಡಿದ್ದಾರೆ.
ಪಠ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಹ ಬೆಂಕಿಗೆ ಹಾಕಿದ್ದು, ಘಟನೆ ಸಂಬಂಧ ಶಾಲಾ ಮುಖ್ಯೋಪಾಧ್ಯಾಯರಾದ ಸೌಭಾಗ್ಯ ಅವರು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.