ಬೆಂಗಳೂರು: ಇತ್ತೀಚೆಗೆ ವಿಧಾನಸಭೆಯ ಸಭಾಂಗಣಕ್ಕೆ ಆಗಮಿಸಿ ಜೆಡಿಎಸ್ ಶಾಸಕಿ ಕರೆಮ್ಮ ಅವರಿಗೆ ಮೀಸಲಾದ ಸ್ಥಾನದಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯನ್ನು ಪತ್ತೆ ಹಚ್ಚಿ ಇದೀಗ ವಿಧಾನಸೌಧ ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು ಟಿ ಖಾದರ್ ಸದನಕ್ಕೆ ಮಾಹಿತಿ ನೀಡಿದ್ದಾರೆ. ಪ್ರಶ್ನೋತ್ತರ ಕಲಾಪದ ನಂತರ ಸಭಾಧ್ಯಕ್ಷರು, ಈ ವಿಷಯ ಕುರಿತು ಸ್ವಯಂ ಪ್ರೇರಿತ ಹೇಳಿಕೆ ನೀಡಿ, ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಸದನಕ್ಕೆ ಬಂದಿದ್ದ ಅಪರಿಚಿತ ವ್ಯಕ್ತಿಯನ್ನು ತಿಪ್ಪೇರುದ್ರಪ್ಪ ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.
ಇವರು 76 ವರ್ಷದ ಚಿತ್ರದುರ್ಗದ ನಿವಾಸಿವಾಗಿದ್ದಾರೆ. ಈ ವ್ಯಕ್ತಿ ತಾನು ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎಂದು ವಿಧಾನಸಭೆ ಭದ್ರತಾ ಸಿಬ್ಬಂದಿಗೆ ಸುಳ್ಳು ಹೇಳಿ ಸದನ ಪ್ರವೇಶಿಸಿದ್ದರು. ಈ ಕ್ಷೇತ್ರವನ್ನು ಎನ್ ವೈ ಗೋಪಾಲಕೃಷ್ಣ ಅವರು ಪ್ರತಿನಿಧಿಸುತ್ತಿದ್ದು, ಅವರ ಹೆಸರಿನಲ್ಲಿ ಈ ವ್ಯಕ್ತಿ ಸದನಕ್ಕೆ ಆಗಮಿಸಿದ್ದರು. ವ್ಯಕ್ತಿಯ ಬಗ್ಗೆ ಸಂಶಯಗೊಂಡ ಅಕ್ಕ ಪಕ್ಕದ ಶಾಸಕರು ತಮ್ಮ ಗಮನಕ್ಕೆ ತಂದಾಗ ಭದ್ರತಾ ಸಿಬ್ಬಂದಿಯಿಂದ ವಿಚಾರಣೆಗೆ ಒಳಪಡಿಸಿದಾಗ, ಸುಳ್ಳು ಹೇಳಿ ಸದನಕ್ಕೆ ಬಂದಿರುವ ವಿಚಾರ ಖಚಿತವಾಯಿತು. ಅವರನ್ನು ಕೂಡಲೇ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದರು. ಈ ಘಟನೆ ಹಿನ್ನೆಲೆಯಲ್ಲಿ ಇನ್ನು ಮುಂದೆ ಶಾಸಕರು, ಸಚಿವರು ಮತ್ತು ಮಾಧ್ಯಮದವರು ಭದ್ರತಾ ಸಿಬ್ಬಂದಿಗೆ ತಮ್ಮ ಗುರುತಿನ ಚೀಟಿ ತೋರಿಸಿ ಒಳ ಬರಬೇಕು. ಭದ್ರತಾ ಸಿಬ್ಬಂದಿ ಜೊತೆ ಸಹಕರಿಸಬೇಕು. ಯಾರೂ ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಳ್ಳಬಾರದು ಎಂದು ಸ್ಪೀಕರ್ ಮನವಿ ಮಾಡಿದರು.
ಭದ್ರತೆಗೆ ಹೊಸ ತಂತ್ರಜ್ಞಾನ: ವಿಧಾನಸೌಧ, ರಾಜಭವನ ಸೇರಿದಂತೆ ಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ಆಗದಂತೆ ಅತ್ಯಾಧುನಿಕ ತಂತ್ರಜ್ಞಾನದ ಭದ್ರತೆಯನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ಸಂಸತ್ ಭವನ ಪ್ರವೇಶಿಸುವ ರಾಜ್ಯಸಭೆ ಹಾಗೂ ಲೋಕಸಭೆ ಸದಸ್ಯರ ಗುರುತು ಪತ್ತೆ ಹಚ್ಚುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಆ ರೀತಿ ಸೌಲಭ್ಯವನ್ನು ಇಲ್ಲೂ ಸಹ ಅಳವಡಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ:ಅನ್ನಭಾಗ್ಯ ಯೋಜನೆ: ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆ; ಸಂಜೆ ಸಿಎಂ ಸಿದ್ದರಾಮಯ್ಯ ಚಾಲನೆ
ಈ ಬಗ್ಗೆ ಮಾಹಿತಿ ನೀಡಿದ್ದ ನಗರ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ, 'ಸಂದರ್ಶಕರ ಎಂಟ್ರಿ ಪಾಸ್ ಪಡೆದಿದ್ದ ತಿಪ್ಪೇರುದ್ರಪ್ಪ ಮೂಲತಃ ವಕೀಲರಾಗಿದ್ದು, ಸ್ವಲ್ಪ ಮಾನಸಿಕ ಸಮಸ್ಯೆ ಹೊಂದಿರುವ ಬಗ್ಗೆ ಶಂಕೆಯಿದೆ. ವಿಧಾನಸಭೆ ಪ್ರವೇಶದ್ವಾರದ ಬಳಿ ಶಾಸಕ ಎಂದು ಹೇಳಿ ಒಳ ಬಂದಿದ್ದರು. ನಂತರ ಮಾರ್ಷಲ್ ಗೂ ಇದೇ ರೀತಿ ಹೇಳಿ ಒಳಗೆ ಹೋಗಿದ್ದರು. ಹೊಸ ಎಂಎಲ್ ಎ ಇರಬೇಕೆಂದು ಮಾರ್ಷಲ್ ಗಳು ಒಳಗೆ ಬಿಟ್ಟಿದ್ದರು. ಪ್ರಾಥಮಿಕ ತನಿಖೆ ವೇಳೆ ಬಜೆಟ್ ಸೆಷನ್ ಹಿನ್ನೆಲೆ ವಿಧಾನಸಭೆಗೆ ಬಂದಿದ್ದಾಗಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ವಿಧಾನಸಭೆ ಅಕ್ರಮ ಪ್ರವೇಶ, ಶಾಸಕರ ಸ್ಥಾನದ ದುರ್ಬಳಕೆ ಆರೋಪದ ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ' ಎಂದಿದ್ದರು.