ಬೆಂಗಳೂರು: ಕೊರೊನಾ ಬಿಕ್ಕಟ್ಟಿನ ಪರಿಣಾಮದಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ ವಿಳಂಬವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಎಂಬಿಬಿಎಸ್ ಪದವಿ ಪ್ರಮಾಣಪತ್ರ ನೀಡುವಂತೆ ಹೈಕೋರ್ಟ್ ವಿವಿಗೆ ಆದೇಶಿಸಿದೆ.
ಈ ಕುರಿತು ಮಂಗಳೂರಿನ ಲ್ಯಾನ್ಸನ್ ಬ್ರಿಜೇಶ್ ಕೊಲಾಕೊ ಎಂಬ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ಈ ನಿರ್ದೇಶನ ನೀಡಿದೆ. ಘಟಿಕೋತ್ಸವ ವಿಳಂಬದಿಂದಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಬಾರದು. ಹೀಗಾಗಿ ಸೂಕ್ತ ತಿದ್ದುಪಡಿಯೊಂದಿಗೆ ತಾತ್ಕಾಲಿಕ ಪದವಿ ಪ್ರಮಾಣಪತ್ರ ನೀಡಲು 2 ವಾರಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ.
ಅರ್ಜಿದಾರ ವಿದ್ಯಾರ್ಥಿ, ತಾನು ಸುಳ್ಯದ ಕೆ.ವಿ. ಗೌಡ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದೇನೆ. ಆದರೆ ಕೊರೊನಾ ಕಾರಣಕ್ಕಾಗಿ ವಿವಿಯಲ್ಲಿ ಘಟಿಕೋತ್ಸವ ಸಮಾರಂಭ ನಡೆದಿಲ್ಲ. ಇದರಿಂದಾಗಿ ಎಂಬಿಬಿಎಸ್ ಪದವಿ ಪ್ರದಾನವೂ ವಿಳಂಬವಾಗಿದೆ. ಇದರಿಂದ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆ ಆಗಿದೆ. ವಿದೇಶಗಳಲ್ಲಿ ಉನ್ನತ ವ್ಯಾಸಂಗಕ್ಕೆ ಪದವಿ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ ಇಲ್ಲಿ ಕನಿಷ್ಠ ತಾತ್ಕಾಲಿಕ ಪದವಿ ಪತ್ರವನ್ನೂ ಸಹ ನೀಡುತ್ತಿಲ್ಲ. ಹಾಗಾಗಿ ಈ ಕುರಿತು ಸೂಕ್ತ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.