ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಮಹಿಳೆಯರಿಗೆ ಮೂರು ಮಹತ್ವದ ಯೋಜನೆಗಳನ್ನ ಘೋಷಣೆ ಮಾಡಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಅಪೌಷ್ಟಿಕತೆ ತೊಲಗಿಸಲು ಕ್ರಮಕೈಗೊಂಡಿದ್ದಾರೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಬಳಿಕ ನಗರದ ಖಾಸಗಿ ತಾರಾ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
14 ಲಕ್ಷ ಅಂಗನವಾಡಿಗಳ ಅಭಿವೃದ್ಧಿ : 14 ಲಕ್ಷ ಅಂಗನವಾಡಿಗಳ ಅಭಿವೃದ್ಧಿ ಮಾಡಲಾಗುವುದು. ಈಗಾಗಲೇ 11 ಲಕ್ಷ ಅಂಗನವಾಡಿಗಳು ಸಂಪೂರ್ಣವಾಗಿ ಸಿದ್ದವಾಗಿವೆ. ಇದರಿಂದ 9 ಲಕ್ಷ ಜನ ಉಪಯೋಗ ಪಡೆಯಲಿದ್ದಾರೆ. ಭೇಟಿ ಬಚಾವ್, ಭೇಟಿ ಪಡಾವ್ ಯೋಜನೆಯನ್ನು ಮೋದಿ ಪ್ರಾರಂಭಿಸಿದ್ದಾರೆ. ದೇಶದ ಅಂಗನವಾಡಿಗಳಿಗೆ ಸ್ಮಾರ್ಟ್ ಉಪಕರಣಗಳನ್ನ ಕೊಡಲಾಗುತ್ತಿದೆ. ಸದ್ಯ 11 ಲಕ್ಷ ಸ್ಮಾರ್ಟ್ ಉಪಕರಣಗಳನ್ನು ಒದಗಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಅಪೌಷ್ಟಿಕತೆ ತೊಲಗಿಸಲೂ ಕ್ರಮಕೈಗೊಳ್ಳಲಾಗಿದೆ. ಲಿಂಗಾನುಪಾತದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳವಾಗಿದೆ. ಹೆಣ್ಣಿನ ಲಿಂಗಾನುಪಾತ 918 ರಿಂದ 937ಕ್ಕೆ ಹೆಚ್ಚಿದೆ ಎಂದು ಮಾಹಿತಿ ನೀಡಿದರು.
24 ಕೋಟಿ ಮಹಿಳೆಯರು ಬ್ಯಾಂಕ್ ಖಾತೆ ತೆರೆದಿದ್ದಾರೆ : ಪ್ರತಿ ಜಿಲ್ಲೆಯಲ್ಲೂ ಮಹಿಳಾ ಸಹಾಯ ಕೇಂದ್ರ ತೆರೆಯಲಾಗಿದೆ. ಮಹಿಳೆಯರ ವಿರುದ್ಧದ ಎಲ್ಲ ದೌರ್ಜನ್ಯಗಳಿಗೆ ಪರಿಹಾರ ಒದಗಿಸಲು ಮಹಿಳಾ ಸಹಾಯ ಕೇಂದ್ರ ಸಹಾಯ ಮಾಡುತ್ತಿದೆ. ಸದ್ಯ ಇಂತಹ 704 ಮಹಿಳಾ ಸಹಾಯ ಕೇಂದ್ರಗಳು ಕೆಲಸ ಮಾಡುತ್ತಿವೆ. 70 ಲಕ್ಷ ಮಹಿಳೆಯರಿಗೆ ಈ ಸಹಾಯ ಕೇಂದ್ರಗಳಿಂದ ನೆರವು ದೊರೆತಿದೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಸಂಬಂಧ ನಿಯಮಗಳನ್ನು ಮತ್ತಷ್ಟು ಕಠಿಣ ಮಾಡಿದ್ದೇವೆ. ಜನ್‌ಧನ‌್ ಯೋಜನೆಯಡಿ ಖಾತೆಯನ್ನೇ ಹೊಂದಿರದಿದ್ದ 24 ಕೋಟಿ ಮಹಿಳೆಯರು ಬ್ಯಾಂಕ್ ಖಾತೆ ತೆರೆದಿದ್ದಾರೆ. 32 ಕೋಟಿ ಲೋನ್ ಅನ್ನು ಮುದ್ರಾ ಯೋಜನೆಯಡಿ ನೀಡಲಾಗಿದೆ. ಈ ಸಾಲ ಸೌಲಭ್ಯದಲ್ಲಿ ಶೇ.68 ಮಹಿಳೆಯರ ಪಾಲಿದೆ. ಸಖೀ ಯೋಜನೆಯಡಿ 8 ಕೋಟಿ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ನೆರವು ನೀಡಲಾಗಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರ ವೇತನ ಸಮಸ್ಯೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕೇಂದ್ರದಿಂದ ಅಂಗಗನವಾಡಿ ಕಾರ್ಯಕರ್ತೆಯರಿಗೆ 4,500 ಗೌರವ ಧನ ನೀಡಲಾಗುತ್ತಿದೆ.180 ದಿನ ಮೆಟರ್ನಿಟಿ ರಜೆ, 20 ದಿನ ವೇತನ ಸಹಿತ ರಜೆ, ಇತರೆ ಸೌಕರ್ಯ ನೀಡಲಾಗುತ್ತಿದೆ. ಈ ಸಂಬಂಧ ಅನುದಾನವನ್ನು ಕೇಂದ್ರದಿಂದ ರಾಜ್ಯಗಳಿಗೆ ತಲುಪಿಸಲಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸಮರ್ಥ ಆರ್ಥಿಕ ವ್ಯವಸ್ಥೆ ಮೂಲಕ ಗೌರವ ಧನ ಕೊಡಲಾಗುತ್ತಿದೆ. ಇದರಲ್ಲಿ ಯಾವುದೇ ರೀತಿಯ ವಿಳಂಬ ಮಾಡುತ್ತಿಲ್ಲ ಎಂದರು.