ನವದೆಹಲಿ: ಕಬ್ಬು ಬೆಳೆಗಾರರಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬುಧವಾರ ಸಿಹಿ ಕೊಡುಗೆಯೊಂದನ್ನು ನೀಡಿದೆ. ನ್ಯಾಯಸಮ್ಮತ ಹಾಗೂ ಲಾಭದಾಯಕ ಬೆಲೆಯನ್ನು (ಎಫ್ಆರ್ಪಿ) ಕ್ವಿಂಟಾಲ್ಗೆ 290 ರೂ.ಗೆ ಏರಿಸಲಾಗಿದೆ. ಕಬ್ಬಿಗೆ ಇದುವರೆಗೆ ನೀಡಲಾಗಿರುವ ಅತಿ ಹೆಚ್ಚು ಬೆಲೆ ಆಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, 2020-21ರ ಸಾಲಿನಲ್ಲಿ ಸುಮಾರು 91,000 ಕೋಟಿ ರೂಪಾಯಿ ಮೌಲ್ಯದ 2,976 ಲಕ್ಷ ಟನ್ ಕಬ್ಬನ್ನು ರೈತರು ಬೆಳೆದಿದ್ದರು. ಈ ವರ್ಷ ಅದು 3,088 ಲಕ್ಷ ಟನ್, ಅಂದರೆ ಒಟ್ಟು 1,00,000 ಕೋಟಿ ಮೌಲ್ಯದ ಬೆಳೆಯನ್ನು ಬೆಳೆಯಲಾಗುತ್ತದೆ ಎಂಬುದನ್ನು ಅಂದಾಜಿಸಲಾಗಿದೆ ಎಂದರು.
ಹೀಗಾಗಿ, ಇತ್ತೀಚೆಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಭಾಗಿದಾರರ ಜೊತೆ ಸಭೆ ನಡೆಸಿದೆ. ಕಬ್ಬನ್ನು ಇಥೆನಾಲ್ಗೂ ಬಳಕೆ ಮಾಡಬೇಕೆಂಬ ನಿರ್ಧಾರ ಮಾಡಿದೆ. ಇದರಿಂದ ಪೆಟ್ರೋಲಿಯಂ ಆಮದನ್ನು ಕಡಿಮೆ ಮಾಡಬಹುದು ಎಂಬ ಉದ್ದೇಶವನ್ನು ಹೊಂದಲಾಗಿದೆ. 2018-19ರಲ್ಲಿ ಸುಮಾರು 3.3 ಮಿಲಿಯನ್ ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಇಥೇನಾಲ್ಗೆ ಬಳಕೆ ಮಾಡಲಾಗಿತ್ತು. 2019-20ರಲ್ಲಿ 9.26 ಮಿಲಿಯನ್ ಟನ್ ಬಳಕೆ ಮಾಡಲಾಗಿತ್ತು ಎಂದು ತಿಳಿಸಿದರು.
ರೈತರಿಗೆ ಸಹಾಯಕವಾಗಲಿದೆ: ಪ್ರತಿ ಕ್ವಿಂಟಾಲ್ಗೆ ನಮಗೆ ಸುಮಾರು 155 ರೂ ಖರ್ಚು ತಗುಲುತ್ತದೆ ಎಂದು ರೈತರು ಈ ಹಿಂದೆ ಹೇಳಿಕೊಂಡಿದ್ದರು. ಹೀಗಾಗಿ ಅವರಿಗೆ ತಗುಲುವ ಖರ್ಚಿನ ಶೇ. 10 ಭಾಗದಷ್ಟು ಹೆಚ್ಚುವರಿ ಬೆಲೆಯನ್ನು ನಿಗದಿ ಮಾಡಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸುಮಾರು 5 ಕೋಟಿಯಷ್ಟು ಸಣ್ಣ ಮತ್ತು ಅತಿಸಣ್ಣ ರೈತರು ಕಬ್ಬನ್ನು ಬೆಳೆಯುತ್ತಾರೆ. ಸುಮಾರು 5 ಲಕ್ಷದಷ್ಟು ಜನ ಕಬ್ಬಿನ ಕಾರ್ಖಾನೆ ಹಾಗೂ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಇವರೆಲ್ಲರನ್ನೂ ಗಮನದಲ್ಲಿಟ್ಟುಕೊಂಡು ಎಫ್ಆರ್ಪಿ ಬೆಲೆಯನ್ನು 290 ರೂಗೆ ಹೆಚ್ಚಳ ಮಾಡಲಾಗಿದೆ. ಇದು ರೈತರಿಗೆ ಸಹಾಯಕವಾಗಲಿದೆ ಎಂಬ ಅಪೇಕ್ಷೆ ನಮ್ಮದು ಎಂದರು.
ಓದಿ: ಕೇಂದ್ರ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕಾಗಿ 2.31 ಲಕ್ಷ ಕೋಟಿ ರೂ. ಮೀಸಲು : ಸಚಿವೆ ಶೋಭಾ ಕರಂದ್ಲಾಜೆ