ಬೆಂಗಳೂರು : ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ದೇಶದಲ್ಲಿ ಹತ್ತು ಸಾವಿರ ಕೃಷಿ ಉತ್ಪಾದಕರ ಸಂಘ ( ಎಫ್ಪಿಒ) ಗಳನ್ನು ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ವಿಕಾಸಸೌಧದಲ್ಲಿ ಇಂದು ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಕಾರ್ಯಚಟುವಟಿಕೆ ಮತ್ತು ಕಾರ್ಯಕ್ಷಮತೆ ಪರಿಶೀಲನಾ ಸಭೆ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ಭಾಗವಹಿಸಿದ್ದರು.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ 10 ಸಾವಿರ ಎಫ್ಪಿಒಗಳನ್ನು ಮಾಡಲು ತೀರ್ಮಾನಿಸಲಾಗಿದೆ. ಮುಂದಿನ ಮೂರು ವರ್ಷದಲ್ಲಿ 750 ಎಫ್ಪಿಒಗಳನ್ನು ಕರ್ನಾಟಕದಲ್ಲಿ ತೆರೆಯಲು ನಿರ್ಧರಿಸಲಾಗಿದೆ. ವರ್ಷದಲ್ಲಿ ಕನಿಷ್ಠ ವಿಧಾನಸಭೆಗೆ ಒಂದರಂತೆ ಎಫ್ಪಿಒಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಎಫ್ ಪಿಒಗಳಿಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ಪ್ರತಿ ಜಿಲ್ಲೆಯಲ್ಲಿ ಕ್ಲಸ್ಟರ್:
ರಫ್ತು ಗುಣಮಟ್ಟದ ಉತ್ಪಾದನೆಗೆ ಆದ್ಯತೆ ನೀಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ಕ್ಲಸ್ಟರ್ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಇದರಿಂದ ಎಥೆನಾಲ್ ಮಾಡಲು ಆದ್ಯತೆ ನೀಡಲಾಗುವುದು. ಗೋದಿ, ಅಕ್ಕಿಯಿಂದಲೂ ಎಥೆನಾಲ್ ಮಾಡಲು ಬರುತ್ತದೆ ಎಂದು ತಜ್ಞರು ಹೇಳುತ್ತಾರೆ. ಅದಕ್ಕೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದ್ದಾರೆ.
ಸಿರಿಧಾನ್ಯ ಬೆಳೆಗೆ ಆದ್ಯತೆ :
2023ರ ವರ್ಷವನ್ನು ಸಿರಿಧಾನ್ಯಗಳ ವರ್ಷ ಎಂದು ವಿಶ್ವ ಸಂಸ್ಥೆ ಘೋಷಣೆ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಹೆಚ್ಚಿನ ಸಿರಿಧಾನ್ಯ ಬೆಳೆಗೆ ಆದ್ಯತೆ ನೀಡಲಾಗುವುದು. 75 ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ತೋಟಗಾರಿಕಾ ರಪ್ತುದಾರರ ಸಮಾವೇಶವನ್ನು ಸೆ.22 ರಂದು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಬೆಳೆ ವಿಮೆ ನೀಡಲು ರೈತರೇ ನಿರ್ಧರಿಸಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಸರ್ಕಾರವನ್ನು ಅಭಿನಂದಿಸುತ್ತೇನೆ. ಸರ್ಕಾರ ಅಭಿವೃದ್ಧಿ ಪಡಿಸಿರುವ ಯೋಜನೆಯನ್ನು ದೇಶಾದ್ಯಂತ ವಿಸ್ತರಿಸಲಾಗುವುದು ಎಂದರು.
ಆಂಧ್ರಪ್ರದೇಶದಲ್ಲಿ ಕೃಷಿ ಭರವಸಾ ಯೋಜನೆ ಜಾರಿ ಮಾಡಿದ್ದಾರೆ. ತಮಿಳುನಾಡಿನಲ್ಲಿ ತರಕಾರಿ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಈ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಬೇಕು. ರಫ್ತು ಉದ್ಯಮಕ್ಕೆ ಉತ್ತೇಜನ ನೀಡಲು ಕ್ರಮ ವಹಿಸಲಾಗುವುದು. ಒಳನಾಡಿನ ಮೀನುಗಾರಿಕೆಗೆ ಉತ್ತೇಜನ, ರೇಷ್ಮೆ ಬೆಳೆ ಉತ್ತೇಜನ, ರೇಷ್ಮೆಗೆ ಇ- ಮಾರುಕಟ್ಟೆ ಜಾರಿಗೆ ತರಲು ತೀರ್ಮಾನ, ಶೇ 50 ರಷ್ಟು ರೈತರು ಇ - ಪೇಮೆಂಟ್ ವ್ಯವಸ್ಥೆಗೆ ಅಳವಡಿಸಿಕೊಂಡಿದ್ದಾರೆ.
ಸುಮಾರು 57 ಕೋಟಿ ರೂ. ರೈತರಿಗೆ ನೇರವಾಗಿ ಅವರ ಅಕೌಂಟ್ಗೆ ಬೆಳೆ ವಿಮೆ ಹಣ ತಲುಪಿಸಲಾಗಿದೆ. ದೇಶದ ಇತಿಹಾಸದಲ್ಲಿ 320 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕೈಗಾರಿಕಾ ಇಲಾಖೆಯಲ್ಲಿ ಪ್ರತ್ಯೇಕ ವಿಂಗ್ :
ಆಹಾರ ರಫ್ತು ಮಾಡಲು ಕೈಗಾರಿಕಾ ಇಲಾಖೆಯಲ್ಲಿ ಪ್ರತ್ಯೇಕ ಪುಟ್ ಪ್ರೊಸೆಸಿಂಗ್ ವಿಂಗ್ ಮಾಡುವ ಕುರಿತು ಇಂದು ಸಂಜೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಜೊತೆ ಚರ್ಚೆ ನಡೆಸಲಾಗುತ್ತದೆ ಎಂದರು.
ಇಂದು ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಸಭೆ ನಡೆಸಲಾಗಿದೆ. ರಾಜ್ಯದಲ್ಲಿ ಕೃಷಿಯನ್ನು ಹೇಗೆ ಲಾಭದಾಯಕವಾಗಿ ಮಾಡಬಹುದು ಎನ್ನುವ ಬಗ್ಗೆ ಚರ್ಚೆಯಾಗಿದೆ. ಪ್ರಧಾನಿ ಮೋದಿಯವರು ರೈತರು ಕೃಷಿಯಲ್ಲಿ ಮುಂದುವರೆಯಬೇಕು. ಕೃಷಿಯಲ್ಲಿಯೇ ಹೆಚ್ಚಿನ ಆದಾಯ ಪಡೆಯುವಂತಾಗಬೇಕು ಎಂಬ ಇಚ್ಚೆ ಹೊಂದಿದ್ದಾರೆ ಎಂದರು.
ಕೃಷಿಗೆ ಒತ್ತು:
ಸಣ್ಣ ರೈತರು ಕೃಷಿ ಲಾಭದಾಯಕವಲ್ಲ ಎಂದು ನಗರಕ್ಕೆ ವಲಸೆ ಹೋಗುವ ಪ್ರಮಾಣ ಹೆಚ್ಚಾಗಿದೆ. ಕೃಷಿ ಆದಾಯ ಹೆಚ್ಚಳ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಕೃಷಿಗೆ 1.30 ಲಕ್ಷ ಕೋಟಿ ರೂ. ಬಜೆಟ್ನಲ್ಲಿ ಮೀಸಲಿಡಲಾಗಿದೆ. ಮಿಶ್ರ ಬೆಳೆ ಬೆಳೆದ ರೈತರು ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಅಲ್ಲದೇ ಉಪ ಕಸುಬುಗಳಾಗಿ ಕೋಳಿ ಸಾಕಣೆ, ಕುರಿ, ಜೇನು ಸಾಕಣೆ, ಮೀನು ಸಾಕಣೆ ಮಾಡಲಾಗುತ್ತಿದೆ.
ಅಗ್ರೊ ಫಾರೆಸ್ಟ್ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಾಯ ಮಾಡುತ್ತಿವೆ. ಕೃಷಿಗೆ ಸಂಬಂಧಿಸಿದ ಕೆಲಸಗಳನ್ನು ಎನ್ಆರ್ಇಜಿ ಮೂಲಕ ಜಾರಿಗೆ ಆದ್ಯತೆ ನೀಡಲಾಗುವುದು. ಎಫ್ಪಿಒಗಳ ಮೂಲಕ ಕೃಷಿ ಉತ್ಪನ್ನಗಳ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರವಾಹ ಪರಿಹಾರವಾಗಿ ಎನ್ಡಿಆರ್ಎಫ್ ಮೂಲಕ 630 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೊರೊನಾದಿಂದ ಎರಡು ವರ್ಷ ಹಿನ್ನಡೆಯಾಗಿದೆ. ರಸಗೊಬ್ಬರ ಬೆಲೆ ಹೆಚ್ಚಳವಾದರೂ ಕೇಂದ್ರ ಸರ್ಕಾರ ಸಬ್ಸಿಡಿ ಕೊಡುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ತೋಟಗಾರಿಕೆ ಸಚಿವ ಮುನಿರತ್ನ, ರೇಷ್ಮೆ ಸಚಿವ ನಾರಾಯಣಗೌಡ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.