ಬೆಂಗಳೂರು: ಭಾರತೀಯ ಜನತಾ ಪಕ್ಷ ದಲಿತರ ವಿರೋಧಿ ಹಾಗೂ ಸಂವಿಧಾನ ವಿರೋಧಿ ಎನ್ನುವ ವಿರೋಧ ಪಕ್ಷಗಳ ಟೀಕೆಗೆ ಸಾಮಾಜಿಕ ನ್ಯಾಯದ ನಿಜ ಅರ್ಥವನ್ನು ತೋರಿಸುವ ಮೂಲಕ ತಕ್ಕ ಎದುರೇಟು ನೀಡಿದೆ. ಅಲ್ಲದೇ ನಾವು ನೀಡಿರುವ ಮೀಸಲಾತಿಯನ್ನ ರದ್ದುಗೊಳಿಸುವ ತಾಕತ್ತು ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಅದನ್ನು ರದ್ದುಗೊಳಿಸುವ ಪ್ರಯತ್ನ ಪ್ರಾರಂಭಿಸಿದ ದಿನದಿಂದಲೇ ಆ ಪಕ್ಷದ ಕೊನೆಯ ದಿನಗಳು ಪ್ರಾರಂಭವಾಗಲಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಶುಕ್ರವಾರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ 132ನೇ ಭಾರತರತ್ನ ಡಾ. ಬಿ. ಆರ್ ಅಂಬೇಡ್ಕರ್ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದ. ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ವಿರೋಧ ಪಕ್ಷಗಳು ನಮ್ಮ(ಬಿಜೆಪಿ) ಪಕ್ಷದ ಮೇಲೆ ಇನ್ನಿಲ್ಲದ ಆರೋಪಗಳನ್ನು ಮಾಡಿದವು. ದಲಿತ ವಿರೋಧಿ, ಸಂವಿಧಾನ ವಿರೋಧಿ ಎನ್ನುವ ಮೂಲಕ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡಿದ್ದರು. ಆದರೆ, ಡಾ. ಬಿ ಆರ್ ಅಂಬೇಡ್ಕರ್ ಅವರ ರಚಿಸಿದ ಸಂವಿಧಾನದ ಸಾಮಾಜಿಕ ನ್ಯಾಯವನ್ನು ನಿಜ ಅರ್ಥದಲ್ಲಿ ದೇಶದಲ್ಲಿ ಅಳವಡಿಸಿದ್ದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಸಾಮಾಜಿಕವಾಗಿ ಹಿಂದುಳಿದ ಜನರಿಗೆ ದೇಶದ ಅತ್ಯುನ್ನತ ಹುದ್ದೆಗಳನ್ನ ನೀಡುವ ಮೂಲಕ ಸಾಮಾಜಿಕವಾಗಿ ಹಿಂದುಳಿದ ಜನರಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ನಮ್ಮ ಪಕ್ಷದ ಧೋರಣೆ ಏನು ಎನ್ನುವುದನ್ನ ತೋರಿಸಿ ಕೊಟ್ಟಿದ್ದಾರೆ. ಅದೇ ರೀತಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ಮೂಲಕ ತಮ್ಮ ನಿಲುವನ್ನ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಪ್ರತಿಪಕ್ಷಗಳ ಬಾಯಿ ಮುಚ್ಚಿಸಿದ್ದೇವೆ ಎಂದರು.
40 ವರ್ಷಗಳ ಹೋರಾಟಕ್ಕೆ ತಾರ್ಕಿತ ಅಂತ್ಯ: ಸಾಮಾಜಿಕವಾಗಿ ಹಿಂದುಳಿದವರ ಸರ್ವತೋಮುಖ ಅಭಿವೃದ್ದಿಯಲ್ಲಿ ಬಿಜೆಪಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ಮೀಸಲಾತಿಗಾಗಿ ಹಲವಾರು ಹೋರಾಟ ನಡೆದಿದ್ದವು. 40 ವರ್ಷಗಳ ಹೋರಾಟಕ್ಕೆ ತಾರ್ಕಿತ ಅಂತ್ಯ ನೀಡಿದ್ದು ನಮ್ಮ ಸರ್ಕಾರ. ಕಾಂಗ್ರೆಸ್ ವೋಟ್ ರಾಜಕಾರಣ ಮಾಡುತ್ತಿದೆ. ತನ್ನ ವೈಯಕ್ತಿಕ ಹಿತಾಸಕ್ತಿಗೋಸ್ಕರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ್ದರ ವಿರುದ್ದ ಧ್ವನಿ ಎತ್ತಿದೆ. ಅವರಿಗೆ ತಾಕತ್ ಇದ್ದರೆ ಮೀಸಲಾತಿಯನ್ನು ರದ್ದುಗೊಳಿಸಲಿ ಎಂದು ಸಚಿವರು ಸವಾಲು ಹಾಕಿದರು.
ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ "ದೇಶದ ಶೋಷಿತ ವರ್ಗದ ಜನರ ಅಭ್ಯದಯಕ್ಕೆ ಕಾರಣಕರ್ತರಾಗಿರುವ ಡಾ. ಬಿ. ಆರ್ ಅಂಬೇಡ್ಕರ್ ಅವರ ಸಾಮಾಜಿಕ ಅಭ್ಯದಯದ ಹಾದಿ ನಮ್ಮೆಲ್ಲರಿಗೂ ಪ್ರೇರಣೆ. ಈ ಹಾದಿಯಲ್ಲಿ ನಡೆಯುವ ಧೃಢ ನಿರ್ಧಾರ ನಮ್ಮದಾಗಿದೆ. ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಸಾಮಾಜಿಕವಾಗಿ ಹಿಂದುಳಿದ ಜನರ ಅಭ್ಯದಯಕ್ಕೆ ಎಲ್ಲ ರೀತಿಯ ಕೊಡುಗೆ ನೀಡಿದೆ. ಡಬಲ್ ಇಂಜಿನ್ ಸರ್ಕಾರ ಡಬಲ್ ಫೋರ್ಸ್‌ನಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಆಶಯಗಳನ್ನು ಕಾರ್ಯಗತಗೊಳಿಸುತ್ತಿದೆ. ನಮ್ಮ ಪಕ್ಷದ ಮೇಲೆ ಸಾಮಾಜಿಕವಾಗಿ ಹಿಂದುಳಿದವರ ಆಶೀರ್ವಾದವಿದ್ದು, ನಮ್ಮ ಕೈ ಹಿಡಿಯಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ನಿಕಟಪೂರ್ವ ಉಪಮೇಯರ್ ರಾಮ್ ಮೋಹನ್ ರಾಜ್ ಸೇರಿದಂತೆ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಜನರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ರದ್ದತಿಗೆ ಸುಪ್ರೀಂ ಕೋರ್ಟ್ ತಪರಾಕಿ ನಿರೀಕ್ಷಿತ: ಸಿದ್ದರಾಮಯ್ಯ