ಬೆಂಗಳೂರು: ಅಭಿವೃದ್ಧಿ, ಆಡಳಿತ, ಪಕ್ಷ ಹಾಗೂ ನಾಯಕತ್ವವೇ ರಾಜ್ಯದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನಾದೇಶಕ್ಕೆ ದಿಕ್ಸೂಚಿಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಬೆಂಗಳೂರಿನ ಟೌನ್ಹಾಲ್ನಲ್ಲಿ ಖಾಸಗಿ ವಾಹಿನಿಯೊಂದು ಗುರುವಾರ ಆಯೋಜಿಸಿದ್ದ 'ಭಾರತದ ರಾಜಕೀಯದ 65 ವರ್ಷಗಳು ಮತ್ತು ನರೇಂದ್ರ ಮೋದಿ ಅವರ ಅವಧಿಯಲ್ಲಿನ ಮಾದರಿ ಬದಲಾವಣೆಗಳು' ಕುರಿತು ಸಂವಾದದಲ್ಲಿ ಅವರು ಮಾತನಾಡಿದರು.
"ವ್ಯಕ್ತಿಯನ್ನು ನೋಡಿ ಮತ ಚಲಾಯಿಸುವ ಬದಲು, ಅಭಿವೃದ್ಧಿ, ಪಕ್ಷ ಹಾಗೂ ನಾಯಕತ್ವ ನೋಡಿ ಮತ ಹಾಕಬೇಕು. ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಕಳೆದ 9 ವರ್ಷಗಳ ಆಡಳಿತ, ಅಭಿವೃದ್ಧಿ, ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿನ ಆಡಳಿತ, ಅಭಿವೃದ್ಧಿ ಹಾಗೂ ಹಿಂದಿನ ಸರ್ಕಾರಗಳ ಆಡಳಿತ, ಅಭಿವೃದ್ಧಿ ಅಧ್ಯಯನ, ತುಲನೆ ಮಾಡಿದರೆ ಪರಿವರ್ತನೆ ಸ್ಫಟಿಕದಷ್ಟೇ ನಿಚ್ಚಳವಾಗಿ ಕಾಣುತ್ತದೆ" ಎಂದರು.
ಜನರ ಒಳಿತಿಗಾಗಿ ಯೋಜನೆ: "ದೇಶದಲ್ಲಿ ಜಾತಿ ರಾಜಕೀಯ ಕೂಡ ಇದೆ. ಕರ್ನಾಟಕದ ಜೆಡಿಎಸ್ ಕೌಟುಂಬಿಕ ಆಧಾರಿತ ಪಕ್ಷವಾಯಿತು. ಆದರೆ, ಬಿಜೆಪಿ ತನ್ನ ಸಿದ್ಧಾಂತದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಬಿಜೆಪಿ ಎಂದಿಗೂ ಧರ್ಮಾಧಾರಿತ ಆಡಳಿತ, ಯೋಜನೆಗಳನ್ನು ಮಾಡಿಲ್ಲ. ಎಲ್ಲರನ್ನೂ ಒಳಗೊಂಡ ವಿಕಾಸವನ್ನು ಪ್ರತಿಪಾದಿಸುತ್ತಿದ್ದು, ಅದೇ ಹಾದಿಯಲ್ಲಿ ಹೆಜ್ಜೆ ಹಾಕಿದೆ. ಜಾತಿವಾದ, ತುಷ್ಟೀಕರಣ ಹಾಗೂ ಪರಿವಾರ ವಾದದ ಪಿಡುಗುಗಳಿಂದ ಭಾರತ ಮುಕ್ತವಾಗಿದೆ. ಜನರ ಮೆಚ್ಚುಗೆ ಗಳಿಸಲು ನೀತಿ, ಯೋಜನೆ ಕಾರ್ಯಕ್ರಮಗಳಲ್ಲ. ಜನರ ಒಳಿತು, ಏಳಿಗೆ ಬಯಸಿ ನೀತಿ, ಯೋಜನೆಗಳನ್ನು ರೂಪಿಸಲಾಗಿದೆ" ಎಂದು ತಿಳಿಸಿದರು.
ಜೆಡಿಎಸ್ ಪರಿವಾರವಾದಕ್ಕೆ ಜೋತು ಬಿದ್ದಿದೆ: ಜೆಡಿಎಸ್ ಪರಿವಾರ ವಾದಕ್ಕೆ ಜೋತು ಬಿದ್ದಿದೆ. ಕುಟುಂಬ ಸದಸ್ಯರ ರಾಜಕೀಯ, ಚುನಾವಣೆಗೆ ಸ್ಪರ್ಧೆ ಆಸಕ್ತಿಯನ್ನು ವಿರೋಧಿಸುವುದಿಲ್ಲ. ಆದರೆ, ಕುಟುಂಬದ ಸದಸ್ಯರೆಲ್ಲರೂ ರಾಜಕೀಯದಲ್ಲಿದ್ದು, ಮನೆ ಯಾರು ನಡೆಸುತ್ತಾರೋ ಎಂದು ನನಗೆ ಅಚ್ಚರಿಯಾಗುತ್ತದೆ ಎಂದು ಕುಟುಕಿದರು. ವಿರೋಧ, ಟೀಕೆ - ಟಿಪ್ಪಣಿಯಲ್ಲಿ ಕಮ್ಯುನಿಸ್ಟರು ಸದಾ ಮುಂದಿರುತ್ತಾರೆ. ಯಾರೂ ಸಿಗದಿದ್ದಾಗ ತಮ್ಮವರನ್ನೇ ವಿರೋಧಿಸಲು ಹಿಂಜರಿಯುವುದಿಲ್ಲ. ಆದರೆ, ರಾಷ್ಟ್ರೀಯ ನೂತನ ಶಿಕ್ಷಣ ನೀತಿಯನ್ನು ಕಮ್ಯುನಿಸ್ಟರು ಸೇರಿ ಯಾರೊಬ್ಬರೂ ವಿರೋಧಿಸಿಲ್ಲ ಎಂದು ಇದೇ ವೇಳೆ ಟೀಕಿಸಿದರು.
ಆಂತರಿಕ ಭದ್ರತೆ ಸದೃಢ: ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ಬಳಿಕ ಜಮ್ಮು - ಕಾಶ್ಮೀರಕ್ಕೆ 1.80 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದು, ಯಾವುದೇ ಸಾವು - ನೋವು ಸಂಭವಿಸಿಲ್ಲ. ಕಠ್ಮಂಡುವಿನಿಂದ ತಿರುಪತಿವರೆಗೆ ಜಾಲ ವಿಸ್ತರಿಸುವ ನಕ್ಷೆ - ಲಕ್ಷ್ಯಯಿಟ್ಟುಕೊಂಡಿದ್ದ ನಕ್ಸಲ್ರಿಗೆ ಭ್ರಮನಿರಸನವಾಗಿದೆ. ನಿರ್ದಾಕ್ಷಿಣ್ಯ ಕ್ರಮಗಳಿಂದಾಗಿ ನಕ್ಸಲೀಯ ಚಟುವಟಿಕೆಗಳು 43 ಜಿಲ್ಲೆಗಳಿಗೆ ಇಳಿಕೆಯಾಗಿದೆ. ದೇಶದ ಬಾಹ್ಯ - ಆಂತರಿಕ ಭದ್ರತೆಯ ವಿಷಯದಲ್ಲಿ ಶೂನ್ಯ ಸಹನೆಯ ಸರ್ಕಾರ ನಮ್ಮದು. ಈ ಹಿನ್ನೆಲೆ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದ ಪಿಎಫ್ಐ ಜಾಲವನ್ನು ಭೇದಿಸಿ ನಿಷೇಧದ ಮೂಲಕ ಹೆಡೆಮುರಿ ಕಟ್ಟಿದ್ದೇವೆ ಎಂದರು.
ಮಾತೃ ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ: ರಾಷ್ಟ್ರೀಯ ನೂತನ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲೇ ನೀಡಬೇಕು ಎಂದು ತಿಳಿಸಲಾಗಿದೆ. ದೇಶವು ಮುಂದಿನ ದಿನಗಳಲ್ಲಿ ಬಹುದೊಡ್ಡ ಬದಲಾವಣೆಗೆ ತೆರೆದುಕೊಳ್ಳಲಿದೆ. ನಮ್ಮ ಭಾಷೆ ಎಂದರೆ ಹಿಂದಿಯಷ್ಟೇ ಅಲ್ಲ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಹೀಗೆ ಎಲ್ಲವೂ ನಮ್ಮ ಭಾಷೆಗಳಾಗಿವೆ ಎಂದು ಅಮಿತ್ ಶಾ ಪ್ರತಿಪಾದಿಸಿದರು. ಇನ್ನು ವೈದ್ಯಕೀಯ ಶಿಕ್ಷಣವನ್ನು ಕನ್ನಡದಲ್ಲೇ ನೀಡಬೇಕೆಂದು ಬಯಸುವೆ. ಫ್ರಾನ್ಸ್‌ನವರು ಫ್ರೆಂಚ್ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ನೀಡಲು ಶಕ್ತ ಎನ್ನುವುದಾದರೆ ಅಷ್ಟೇ ಜನಸಂಖ್ಯೆಯುಳ್ಳ ಕರ್ನಾಟಕಕ್ಕೆ ಅಸಾಧ್ಯವೇಕೆ? ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ಸಿದ್ಧಾಂತದಲ್ಲಿ ಯಾರಿಗೂ ಯಾವುದೇ ಗೊಂದಲ ಬೇಡ. ಸಾಂಸ್ಕೃತಿಕ ರಾಷ್ಟ್ರವಾದ. ಅಂದರೆ ಕುವೆಂಪು ಸಾಹಿತ್ಯ, ಗುಜರಾತ್, ಮಣಿಪುರ ಕಲೆ, ಭರತನಾಟ್ಯ ಹೀಗೆ ಎಲ್ಲದರಲ್ಲೂ ಎಲ್ಲರಲ್ಲೂ ಕೃಷ್ಣ ಆವರಿಸಿಕೊಂಡಿದ್ದು, ಗಂಗೆ ಸೇರಿ ಎಲ್ಲ ನದಿಗಳ ಬಗ್ಗೆ ಪವಿತ್ರ ಭಾವನೆಯಿದೆ. ಇದೇ ನೆಲದ ಸೊಗಡು, ಬದುಕು ಸಾಂಸ್ಕೃತಿಕ ರಾಷ್ಟ್ರವಾದವಾಗಿದೆ. ಏಕಾತ್ಮ ಮಾನವ ವಾದ (ವೃಷ್ಟಿಯಿಂದ ಸಮಷ್ಟಿಯೆಡೆಗೆ) ಹಾಗೂ ವಂಚಿತರು, ಬಡವರಿಗೆ ವಿಕಾಸದ ಅಧಿಕಾರ (ಅಂತ್ಯೋದಯ ಪರಿಕಲ್ಪನೆ) ಇವುಗಳು ಪಕ್ಷದ ಸಿದ್ಧಾಂತಗಳಾಗಿವೆ ಎಂದು ವಿವರಿಸಿದರು.
ಕಾಂಗ್ರೆಸ್‌ಗೆ ಸಿದ್ಧಾಂತವೇ ಇಲ್ಲ ಅದೊಂದು ಸಂಘಟನೆ. ಸ್ಪೆಷಲ್ ಪರ್ಪಸ್ ವೆಹಿಕಲ್‌ನಂತೆ ಸ್ವಾತಂತ್ರ್ಯಕ್ಕಾಗಿ ಹುಟ್ಟಿ ಹಾಕಲಾಗಿತ್ತು. ಹಾಗಾಗಿ ಗಾಂಧೀಜಿ ಸ್ವಾತಂತ್ರ್ಯ ನಂತರ ವಿಸರ್ಜಿಸಲು ಹೇಳಿದ್ದರು. ಸ್ವಾತಂತ್ರ್ಯ ಶ್ರೇಯಸ್ಸು ತನ್ನ ಅಕೌಂಟಿಗೆ ಸೇರಿಸಿಕೊಂಡ ಕಾಂಗ್ರೆಸ್ ಬ್ರಿಟಿಷರ ಮನಸ್ಥಿತಿಯಿಂದ ಹೊರ ಬಂದಿಲ್ಲ. ಪರಿವಾರ ವಾದದಲ್ಲಿ ಮುಳುಗಿ ಹೋಗಿದ್ದು, ಆಂತರಿಕ ಪ್ರಜಾಪ್ರಭುತ್ವ ಕಾಣೆಯಾಗಿದೆ ಎಂದು ಅಮಿತ್ ಶಾ ಟೀಕಿಸಿದರು.
ಇದನ್ನೂ ಓದಿ: ಜೆಡಿಎಸ್ಗೆ ನೀಡುವ ಒಂದೊಂದು ಮತವೂ ಕಾಂಗ್ರೆಸ್‌ಗೆ ಹೋಗುತ್ತದೆ: ಅಮಿತ್ ಶಾ