ಆನೇಕಲ್: ರಾಜ್ಯದ ಸಮಗ್ರ ಅಭಿವೃದ್ಧಿ ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸುಳ್ಳು ಭರವಸೆಗಳನ್ನು ನೀಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತದೆ. ಹಾಗಾಗಿ, ಬಿಜೆಪಿಗೆ ಸ್ಪಷ್ಟ ಬಹುಮತ ನೀಡುವ ಮೂಲಕ ನಮ್ಮ ಕೈ ಬಲಪಡಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಚಂದಾಪುರದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಹುಲ್ಲಳ್ಳಿ ಶ್ರೀನಿವಾಸ ಪರ ರೋಡ್ ಶೋ ನಡೆಸಿ ಮಾತನಾಡಿದ ಅವರು, "ಆನೇಕಲ್ನಲ್ಲಿ ಬಿಜೆಪಿ ಅಭ್ಯರ್ಥಿ ಹುಲ್ಲಳ್ಳಿ ಶ್ರೀನಿವಾಸ್ ಸ್ಪರ್ಧೆ ಮಾಡಿದ್ದಾರೆ, ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜನರು ಬಿಜೆಪಿ ಬೆಂಬಲಿಸುವ ಮೂಲಕ ಸುಭದ್ರ ದೇಶ ಕಟ್ಟಲು ಕೈಜೋಡಿಸಬೇಕು" ಎಂದು ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಹುಲ್ಲಳ್ಳಿ ಶ್ರೀನಿವಾಸ್ ಮಾತನಾಡಿ, "ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಆನೇಕಲ್ ತಾಲೂಕಿಗೆ ಪ್ರಚಾರಕ್ಕೆ ಆಗಮಿಸುವ ಮೂಲಕ ಈ ಭಾಗದಲ್ಲಿ ಬಿಜೆಪಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಿದ್ದಾರೆ. ಆನೇಕಲ್ ತಾಲೂಕಿನಲ್ಲಿ ಈ ಬಾರಿ ಜನ ಬದಲಾವಣೆಯನ್ನು ಬಯಸಿದ್ದು, ಪ್ರತಿ ಗ್ರಾಮಕ್ಕೆ ತೆರಳಿದಾಗಲೂ ಒಳ್ಳೆಯ ಪ್ರತಿಕ್ರಿಯೆ ವ್ಯರ್ಥವಾಗುತ್ತಿದೆ. ಇಂದು ಮಳೆಯ ನಡುವೆಯೂ ಚಂದಾಪುರದಲ್ಲಿ ನಡೆದ ರೋಡ್ ಶೋಗೆ ಆಗಮಿಸಿ ಪ್ರಚಾರದಲ್ಲಿ ಭಾಗಿಯಾಗಿದ್ದನ್ನು ನೋಡಿದರೆ ಆನೇಕಲ್ ತಾಲೂಕಿನಲ್ಲಿ ಅತಿ ಹೆಚ್ಚು ಅಂತರದಿಂದ ನಾನು ಗೆದ್ದು ಬರುವುದರಲ್ಲಿ ಯಾವುದೇ ಸಂದೇಹವಿಲ್ಲ" ಎಂದರು.
ಇದನ್ನೂ ಓದಿ : ಬೆಳಗಾವಿ ದಕ್ಷಿಣದಲ್ಲಿ ಅಮಿತ್ ಶಾ ಮತಬೇಟೆ: ಅಭಯ ಪಾಟೀಲ ಪರ ಭರ್ಜರಿ ರೋಡ್ ಶೋ
ಚಂದಾಪುರದ ಸೂರ್ಯ ನಗರದಲ್ಲಿ ತೆರೆದ ವಾಹನದಲ್ಲಿ ಬಿಗಿ ಭದ್ರತೆಯ ನಡುವೆ ಅರ್ಧ ಕಿಲೋ ಮೀಟರ್ ಸಾಗಿದ ರೋಡ್ ಶೋ ಚಂದಾಪುರ ವೃತ್ತದಲ್ಲಿ ಕೊನೆಗೊಂಡಿತು. ಗೃಹಮಂತ್ರಿ ಅಮಿತ್ ಶಾ ರೋಡ್ ಶೋ ಹಿನ್ನೆಲೆಯಲ್ಲಿ ಚಂದಾಪುರ ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ತುಂಬಿತ್ತು. ತೆರೆದ ವಾಹನದಲ್ಲಿ ಶಾ ಸಾಗುತ್ತಿದ್ದಾಗ ಜನ ಮೋದಿ ಮೋದಿ ಎನ್ನುವ ಜಯ ಘೋಷ ಕೂಗಿದರು.
ಇದನ್ನೂ ಓದಿ : ಬೆಳಗಾವಿಯಲ್ಲಿ ಅಮಿತ್ ಶಾ ರೋಡ್ ಶೋ: ವಿಡಿಯೋ
ಬಿಗಿ ಭದ್ರತೆ : ಅಮಿತ್ ಶಾ ರೋಡ್ ಶೋ ಕಾರಣಕ್ಕೆ ಚಂದಾಪುರದಲ್ಲಿ ನೂರಾರು ಮಂದಿ ಪೊಲೀಸ್ ಸಿಬ್ಬಂದಿ ಹಾಗೂ ಎನ್ಎಸ್ಎಫ್ ಸೆಕ್ಯೂರಿಟಿ ಫೋರ್ಸ್ ನಿಯೋಜಿಸಲಾಗಿತ್ತು. ಬಿಜೆಪಿ ಮುಖಂಡರಾದ ಕೆ.ವಿ.ಶಿವಪ್ಪ, ಎನ್.ಬಸವರಾಜು, ಮುರಳಿ, ಕೃಷ್ಣಾ ರೆಡ್ಡಿ, ಮಂಡಲ ಅಧ್ಯಕ್ಷರಾದ ನಾಯನಹಳ್ಳಿ ಮುನಿರಾಜು, ಸುರೇಶ್,ಬಿಬಿಐ ಮುನಿರೆಡ್ಡಿ, ಎನ್ ಶಂಕರ್, ಎಸ್.ಆರ್.ಟಿ ಅಶೋಕ್ ರೆಡ್ಡಿ ಮತ್ತಿತರರು ಇದ್ದರು.
ಇದನ್ನೂ ಓದಿ : ಬಾಗಲಕೋಟೆಯ 7 ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ಖಚಿತ: ಅಮಿತ್ ಶಾ