ಬೆಂಗಳೂರು: ರಾಜ್ಯಕ್ಕೆ 2 ದಿನಗಳ ಭೇಟಿಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಇಂದು ಮಂಡ್ಯ ಜಿಲ್ಲೆಗೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಗುರುವಾರದಂದು ವಲಯ ಐಜಿಪಿ ಅಲೋಕ್ ಕುಮಾರ್, ದಕ್ಷಿಣ ವಿಶ್ವವಿದ್ಯಾನಿಲಯಕ್ಕೆ ಆಗಮಿಸಿದ ಪ್ರವೀಣ್ ಮಧುಕರ್ ಪವಾರ್, ಮಂಡ್ಯ ವಿಶ್ವವಿದ್ಯಾನಿಲಯಕ್ಕೆ ಆಗಮಿಸಿ ಭದ್ರತೆಯ ಕುರಿತು ಪರಿಶೀಲನೆ ನಡೆಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಮತ್ತು ನಿರ್ಗಮನದ ವೇಳೆ ಭದ್ರತಾ ಲೋಪವಾಗದಂತೆ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಅಧಿಕಾರಿಗಳು ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ. ಬಂದೋಬಸ್ತ್ ವ್ಯವಸ್ಥೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಗೋಪಾಲಯ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಚರ್ಚೆ ನಡೆಸಿದರು.
ಅಮಿತ್ ಶಾ ಅವರು ಹೆಲಿಕಾಪ್ಟರ್‌ನಲ್ಲಿ ಬಂದಿಳಿಯಲು ಅನುಕೂಲವಾಗುವಂತೆ ನಗರದ ಪಿಐಟಿ ಕ್ರೀಡಾಂಗಣದಲ್ಲಿ ಮೂರು ಹೆಲಿಕಾಪ್ಟರ್‌ಗಳನ್ನು ನಿರ್ಮಿಸಲಾಗಿದೆ. ಜೊತೆಗೆ, ಮದ್ದೂರು ತಾಲೂಕಿನ ಹುಲಿಗೆರೆಪುರದಲ್ಲೂ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಕೇಂದ್ರ ಗೃಹಸಚಿವರು ಬೆಂಗಳೂರಿನಿಂದ ಹುರೆಪುರ ಹೆಲಿಪ್ಯಾಡ್‌ಗೆ ಬಂದಿಳಿದು, ಅಲ್ಲಿಂದ ರಸ್ತೆ ಮಾರ್ಗವಾಗಿ ಗೆಜ್ಜಲಗೆರೆಯಲ್ಲಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ತೆರಳುವರು.
ಮೆಗಾಡೈರಿ ಸಮಾರಂಭದಲ್ಲಿ ಭಾಗಿ: ಅಲ್ಲಿ ಮೆಗಾ ಡೈರಿ ಉದ್ಘಾಟನಾ ಸಮಾರಂಭದ ನಂತರ ಮತ್ತೆ ಹುಲಿಗೆರೆಪುರ ಹೆಲಿಪ್ಯಾಡ್‌ಗೆ ತೆರಳಿ ಮಂಡ್ಯದ ಪಿಐಟಿ ಕ್ರೀಡಾಂಗಣದಲ್ಲಿರುವ ಹೆಲಿಪ್ಯಾಡ್‌ಗೆ ಬಂದಿಳಿಯುತ್ತಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಮಂಡ್ಯ ವಿಶ್ವವಿದ್ಯಾನಿಲಯದ ಆವರಣಕ್ಕೆ ಬಂದು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮುಖಂಡರಾದ ಅಶೋಕ್ ಜಯರಾಂ, ಎಸ್.ಸಚ್ಚಿದಾನಂದ, ಎಚ್.ಆರ್.ಅರವಿಂದ್, ಎಚ್.ಪಿ.ಮಹೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸುಶ್ರುತ್ ಮುಡಾ ಮಾಜಿ ಅಧ್ಯಕ್ಷೆ ವಿದ್ಯಾ ನಾಗೇಂದ್ರ, ಸಿ.ಟಿ. ಮಂಜುನಾಥ್, ವಿವೇಕ್ ಸೇರಿದಂತೆ ಹಲವಾರು ಪ್ರಮುಖರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.
ಓದಿ: ರಾಜ್ಯ ನಾಯಕರೊಂದಿಗೆ ಅಮಿತ್ ಶಾ ಮಹತ್ವದ ಸಭೆಯಲ್ಲಿ ಈಶ್ವರಪ್ಪ, ಜಾರಕಿಹೊಳಿ ಭವಿಷ್ಯ ನಿರ್ಧಾರ?
ಅಮಿತ್ ಶಾ ಪ್ರವಾಸದ ವೇಳಾಪಟ್ಟಿ: ಡಿ.30 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12.15 ರವರೆಗೆ ಸಮಯವನ್ನು ಕಾಯ್ದಿರಿಸಲಾಗಿದೆ. ಮಧ್ಯಾಹ್ನ 1.10ಕ್ಕೆ ಯಲಹಂಕ ವಾಯುನೆಲೆಯಿಂದ ಭಾರತೀಯ ವಾಯುಪಡೆ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಪ್ರಯಾಣಿಸಲಿದ್ದಾರೆ. 1.45 ರಿಂದ 3.15 ರವರೆಗೆ ಮಂಡ್ಯದ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ ನಡೆಯಲಿರುವ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಸಂಜೆ 5.20ಕ್ಕೆ ಯಲಹಂಕ ವಾಯುನೆಲೆಗೆ ಅಮಿತ್ ಶಾ ವಾಪಸಾಗಲಿದ್ದು, 5.40ಕ್ಕೆ ಅರಮನೆ ಮೈದಾನಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 6.45 ರವರೆಗೆ ಸಹಕಾರಿ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಅಂದು ರಾತ್ರಿ 8 ರಿಂದ 9.30ರವರೆಗೆ ಪಕ್ಷದ ಮುಖಂಡರ ಜೊತೆ ಸಭೆ ನಡೆಸಲು ಸಮಯ ಕಾಯ್ದಿರಿಸಿದ್ದಾರೆ. ಈ ವೇಳೆ ಪಕ್ಷ ಸಂಘಟನೆ, ಪಕ್ಷಕ್ಕೆ ಎದುರಾಗಿರುವ ಸವಾಲುಗಳು ಸೇರಿದಂತೆ ಸಂಘಟನಾತ್ಮಕ ವಿಚಾರಗಳ ಕುರಿತು ರಾಜ್ಯ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಸಚಿವ ಸಂಪುಟ ವಿಸ್ತರಣೆ ವಿಚಾರದ ಕುರಿತು ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ನಾಯಕರ ಜೊತೆಗಿನ ಸಭೆ ನಂತರ ರಾತ್ರಿ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಅಮಿತ್ ಶಾ ವಾಸ್ತವ್ಯ ಹೂಡಲಿದ್ದಾರೆ.
ಡಿ. 31 ರಂದು ಬೆಳಗ್ಗೆ 8.30 ರಿಂದ 9.30 ರವರೆಗೆ ಪಕ್ಷದ ಮುಖಂಡರ ಜೊತೆ ಉಪಹಾರ ಕೂಟ ನಡೆಸಲಿದ್ದಾರೆ. ಈ ವೇಳೆಯೂ ರಾಜಕೀಯ ವಿಚಾರಗಳ ಕುರಿತು ನಾಯಕರ ಜೊತೆ ಸಮಾಲೋಚನೆ ನಡೆಸಿ ಸದ್ಯದ ಪರಿಸ್ಥಿತಿಯ ಅವಲೋಕನ ಮಾಡಲಿದ್ದಾರೆ. ನಂತರ ದೇವನಹಳ್ಳಿ ತಾಲ್ಲೂಕಿನ ಅವತಿ ಗ್ರಾಮಕ್ಕೆ ತೆರಳಲಿದ್ದು, 11 ರಿಂದ 12.30 ರವರೆಗೆ ನಡೆಯಲಿರುವ ಭೂಮಿ ಪೂಜೆ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1 ರಿಂದ 2.30 ರವರೆಗೆ ಮಲ್ಲೇಶ್ವರಂನ ಸೌಹಾರ್ಧ ಸಹಕಾರಿ ಫೆಡರೇಷನ್‌ಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ 4.30ರವರೆಗೆ ಬೂತ್ ಅಧ್ಯಕ್ಷರು ಮತ್ತು ಬೂತ್ ಮಟ್ಟದ ಏಜೆಂಟ್ಗಳ ಸಭೆಯನ್ನು ಅರಮನೆ ಮೈದಾನದಲ್ಲಿ ನಡೆಸಲಿದ್ದಾರೆ. ಸಂಜೆ 5.05 ಗಂಟೆಗೆ ಯಲಹಂಕ ವಾಯುನೆಲೆಯಿಂದ ದೆಹಲಿಗೆ ತೆರಳುವರು.