ಬೆಂಗಳೂರು: ಬಿಜೆಪಿಯವರಿಗೆ ಅಧಿಕಾರದ ಮದ ಹೆಚ್ಚಾಗಿದ್ದು, ಪ್ರಜಾಪ್ರಭುತ್ವ ಮತ್ತು ನಾಗರಿಕ ಹಕ್ಕುಗಳ ಹತ್ತಿಕ್ಕುವ ಕೆಲಸ ಮಾಡುತ್ತಿದ್ಧಾರೆ. ಅವರಿಗೆ ಸಂವಿಧಾನ ಗೊತ್ತಿಲ್ಲ, ಮೂಲಭೂತ ಹಕ್ಕುಗಳ ಬಗ್ಗೆ ಗೊತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಸ್ವಾತಂತ್ರ್ಯ ಹೋರಾಟಗಾರರಾ?, ಅವರು ಸ್ವಾತಂತ್ರ್ಯ ಹೋರಾಟದಲ್ಲೇ ಇರಲಿಲ್ಲ. ದೆಹಲಿಯಲ್ಲಿ ಪಕ್ಷದ ನಾಯಕರಾದ ಡಿ.ಕೆ.ಸುರೇಶ್, ದಿನೇಶ್ ಗುಂಡೂರಾವ್, ಹೆಚ್.ಕೆ.ಪಾಟೀಲ್ ಎಐಸಿಸಿ ಕಚೇರಿಗೆ ಹೋಗುತ್ತಿದ್ದರೆ, ಅವರನ್ನು ಬಂಧಿಸಿದ್ದಾರೆ. ಮ್ಯಾನ್ ಹ್ಯಾಂಡ್ಲಿಂಗ್ ಮಾಡಿದ್ದಾರೆ. ಇದು ಸರ್ವಾಧಿಕಾರದ ನಡೆಯಾಗಿದ್ದು, ಇದನ್ನು ಖಂಡಿಸುತ್ತೇವೆ ಎಂದರು.
ಬಿಜೆಪಿಯವರು ಈ ಹಿಂದಿನ ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುತ್ತಾರೆ. ಈಗ ಅವರೇ ಪ್ರಜಾಪ್ರಭುತ್ವವನ್ನೇ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇದೇನು ಪ್ರಜಾಪ್ರಭುತ್ವವೇ?, ಇದೇನು ಸರ್ವಾಧಿಕಾರವೇ?, ಪೊಲೀಸ್ ಅಧಿಕಾರವೇ?. ಇದು ಅಘೋಷಿತ ತುರ್ತು ಪರಿಸ್ಥಿತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಡಿ ತನಿಖೆ ಮಾಡಲಿ ಅಭ್ಯಂತರವಿಲ್ಲ. ಆದರೆ, ಮುಚ್ಚಿರುವ ಪ್ರಕರಣ ಮತ್ಯಾಕೆ ರೀಓಪನ್ ಮಾಡಿದ್ದಾರೆ. ದ್ವೇಷದ ಕಾರಣಕ್ಕೆ ಈ ಪ್ರಕರಣ ಓಪನ್ ಮಾಡಿದರೆ, ಪ್ರತಿಭಟನೆ ಮಾಡಬೇಕಲ್ಲವಾ ಎಂದು ಕೇಳಿದರು.
ಇದೇ ವೇಳೆ ಮೇಕೆದಾಟು ವಿಷಯವಾಗಿ ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ ಬರೆದ ವಿಚಾರ ಮಾತನಾಡಿ, ನಮ್ಮ ನೀರಿಗೆ ಯಾವುದೇ ತಕರಾರಿಲ್ಲ. ಅವರು (ತಮಿಳುನಾಡು ಸಿಎಂ) ಏನು ಬರೆಯುತ್ತಾರೆ ಎಂಬುವುದು ಮುಖ್ಯವಲ್ಲ. ಇವರು (ಕರ್ನಾಟಕ ಸಿಎಂ) ಇಚ್ಛಾಶಕ್ತಿ ತೋರಬೇಕು. ಕೇಂದ್ರ ಸರ್ಕಾರ ಬಗೆಹರಿಸಬೇಕೆಂದು ಹೇಳಿದರು.
ಇದನ್ನೂ ಓದಿ: ನಮ್ಮ ನಾಯಕರು ಯಾವುದೇ ತಪ್ಪು ಮಾಡಿಲ್ಲ, ಅವರ ಪರ ಹೋರಾಡುತ್ತೇವೆ: ಡಿ.ಕೆ.ಶಿವಕುಮಾರ್