ಬೆಂಗಳೂರು: ಇಬ್ಬರು ಬಾಲಕಿಯರನ್ನು ತಮ್ಮೊಂದಿಗೆ ಕರೆದೊಯ್ದಿದ್ದ ಯುವಕರಿಬ್ಬರನ್ನು ಯಶವಂತಪುರ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಆರೀಫ್ ಹಾಗೂ ವಾಹಿದ್ ಇಬ್ಬರೂ ಉತ್ತರ ಪ್ರದೇಶದ ಮೂಲದವರಾಗಿದ್ದು, ಕೆಲ ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಸುಬೇದಾರ್ ಪಾಳ್ಯ ಬಳಿಯ ಸೋಫಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಯುವಕರಿಬ್ಬರಿಗೆ ಇಬ್ಬರು ಬಾಲಕಿಯರ ಪರಿಚಯವಾಗಿದೆ.
ಇನ್ನು ಇವರ ಪರಿಚಯ ಸ್ನೇಹಕ್ಕೆ ತಿರುಗಿಕೊಂಡಿದೆ. ಬಳಿಕ ನ.4ರಂದು ಬಾಲಕಿಯರು ಆ ಯುವಕರೊಂದಿಗೆ ಮನೆ ಬಿಟ್ಟು ತೆರಳಿದ್ದಾರೆ. ಈ ಸಂಬಂಧ ಬಾಲಕಿಯರ ಪೋಷಕರು ನಮ್ಮ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವುದಾಗಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಸುರೇಶ್ ನೇತೃತ್ವದ ತಂಡ ಸತತ ಕಾರ್ಯಾಚರಣೆ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿತ್ತು. ವಿಚಾರಣೆ ವೇಳೆ ಮಹಾರಾಷ್ಟ್ರದ ಕೊಲ್ಲಾಪುರದ ಸಂಬಂಧಿಕರ ಮನೆಯಲ್ಲಿ ಮತ್ತು ಉತ್ತರಪ್ರದೇಶದಲ್ಲಿ ಬಾಲಕಿಯರಿಬ್ಬರು ಇರುವುದು ತಿಳಿದುಬಂದಿತ್ತು.
ಕೂಡಲೇ ಪೊಲೀಸರು ಬಾಲಕಿಯರಿಬ್ಬರನ್ನು ತಮ್ಮ ವಶಕ್ಕೆ ಪಡೆದು ಪೋಷಕರಿಗೆ ಒಪ್ಪಿಸಿದ್ದಾರೆ. ಈ ಘಟನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.