ಬೆಂಗಳೂರು: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಕಳ್ಳತನ ಮಾಡಿದ್ದ ಯುವತಿಯನ್ನು ಯಲಹಂಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೀದರ್ ಮೂಲದ ಆರ್.ವಾಣಿ ವಾಡೇಕರ್ (22) ಬಂಧಿತೆ. ಯಲಹಂಕದ ಜ್ಯುವೆಲ್ಲರ್ಸ್ ಶಾಪ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆ ಚಿನ್ನಾಭರಣ, ವಜ್ರದ ಕಿವಿಯೋಲೆ ಕದ್ದು ಪರಾರಿಯಾಗಿದ್ದಳು.
ಜುವೆಲ್ಲರ್ಸ್ ಅಂಗಡಿಯಲ್ಲಿ ಸೇಲ್ಸ್ ಆಫೀಸರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ವಾಣಿ, ಎರಡೇ ವಾರದಲ್ಲಿ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ್ದಳು. ಅನುಮಾನಗೊಂಡ ಅಂಗಡಿ ಮಾಲೀಕ ಸ್ಟಾಕ್ಸ್ ಪರಿಶೀಲಿಸಿದಾಗ 58.60 ಲಕ್ಷ ರೂ ಮೌಲ್ಯದ ಚಿನ್ನಾಭರಣ, ವಜ್ರದ ಕಿವಿಯೋಲೆ ನಾಪತ್ತೆಯಾಗಿರುವುದು ಗೊತ್ತಾಗಿದೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಯ ಕೈಚಳಕ ಗೊತ್ತಾಗಿದೆ. ಯಲಹಂಕ ಪೊಲೀಸ್ ಠಾಣೆಗೆ ಜ್ಯುವೆಲ್ಲರ್ಸ್ ಮಾಲೀಕ ಯಲಹಂಕ ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ 2 ಚಿನ್ನದ ಚೈನ್, ಕಿವಿಯೋಲೆ ವಶಕ್ಕೆ ಪಡೆದಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದರು.
ಕದ್ದ ಚಿನ್ನ ನಕಲಿ ಎಂದು ಎಸೆದು ಹೋಗಿದ್ದ ಆರೋಪಿ ಬಲೆಗೆ: ಮನೆ ಮುಂದಿನ ಸಿಸಿಟಿವಿಗಳನ್ನು ಬೇರೆಡೆಗೆ ಮುಖ ಮಾಡುವಂತೆ ತಿರುಗಿಸಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಅಲಿಯಾಸ್ ಕ್ರ್ಯಾಕ್ ಬಂಧಿತ. ಆರೋಪಿಯಿಂದ 19.05 ಲಕ್ಷ ರೂ ಮೌಲ್ಯದ 388 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನವೆಂಬರ್ 20ರಂದು ರಾಮಮೂರ್ತಿ ನಗರದ ಕುವೆಂಪು ಲೇಔಟ್ನ ಮನೆಯೊಂದರ ಬಳಿ ಬಂದಿದ್ದ ಆರೋಪಿ, ಮೊದಲು ಮನೆ ಮುಂದಿನ ಸಿಸಿಟಿವಿಗಳನ್ನು ತಿರುಗಿಸಿ ಒಳಗೆ ನುಗ್ಗಿದ್ದ. ಆದರೆ ಮನೆಯೊಳಗಿನ ಸಿಸಿಟಿವಿಗಳನ್ನು ಗಮನಿಸದೇ ಮುಸುಕು ತೆಗೆದು ಕಳ್ಳತನ ಮಾಡಿದ್ದಾನೆ.
ಬಳಿಕ ಕದ್ದ ಚಿನ್ನಾಭರಣವನ್ನು ಹೊಸೂರಿನಲ್ಲಿ ಮಾರಾಟ ಮಾಡಲು ಹೋಗಿದ್ದ. ಈ ವೇಳೆ ಜ್ಯುವೆಲ್ಲರಿ ಶಾಪ್ ಮಾಲೀಕ ಇದು ನಕಲಿ ಚಿನ್ನವೆಂದು ಹೇಳಿ ಕಳುಹಿಸಿದ್ದಾರೆ. ಕದ್ದ ಚಿನ್ನಾಭರಣ ನಕಲಿಯೆಂದು ತಿಳಿದ ಆರೋಪಿ ಬೇಸರದಲ್ಲಿ ಹೊಸೂರಿನ ರಸ್ತೆ ಬದಿ ಕಸದಲ್ಲಿ ಚಿನ್ನಾಭರಣ ಎಸೆದು ತಲೆಮರೆಸಿಕೊಂಡಿದ್ದನು. ಚಿನ್ನಾಭರಣ ಕಳ್ಳತನವಾದ ಬಗ್ಗೆ ಮನೆಯ ಮಾಲೀಕ ಮಂಜುನಾಥ್ ರಾಮಮೂರ್ತಿ ನಗರ ಠಾಣೆಗೆ ದೂರು ದಾಖಲಿಸಿದ್ದರು. ಆರೋಪಿ ನಕಲಿ ಎಂದು ರಸ್ತೆ ಬದಿಯ ಕಸದಲ್ಲಿ ಎಸೆದಿದ್ದ 19.05 ಲಕ್ಷ ಮೌಲ್ಯದ 388 ಆಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಇದನ್ನೂ ಓದಿ: ಲಾಕ್ ಮಾಡಿಟ್ಟಿದ್ದ ಸ್ಪೋರ್ಟ್ಸ್ ಸೈಕಲ್ ಕದ್ದ ಕಳ್ಳರು: ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳತನದ ದೃಶ್ಯ