ಬೆಂಗಳೂರು: ಕೊರೊನಾ ವಾರಿಯರ್ ಆದ ಪೊಲೀಸರಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು ಸದ್ಯ ಸೀಲ್ಡೌನ್ ಆದ ಠಾಣೆಯ ಇಬ್ಬರು ಸಿಬ್ಬಂದಿಗೆ ಕೊರೊನಾ ದೃಢವಾಗಿದೆ.
ಪಶ್ಚಿಮ ವಿಭಾಗದ ಓರ್ವ ಹೆಡ್ ಕಾನ್ಸ್ಟೆಬಲ್ ಹಾಗೂ ಓರ್ವ ಎಎಸ್ಐಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸದ್ಯ ಇಬ್ಬರನ್ನೂ ಕೂಡ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೊದಲು ಇದೇ ಠಾಣೆಯ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಈ ಸೋಂಕಿತ ಪೇದೆಗಳ ಸಂಪರ್ಕದಲ್ಲಿದ್ದ ಕಾರಣ ಕೆಲವರನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಸದ್ಯ ಕೊರೊನಾ ಸೋಂಕು ದೃಢಪಟ್ಟಿರುವ ಕಾರಣ ಇತರೆ ಸಿಬ್ಬಂದಿಯಲ್ಲಿ ಆತಂಕ ನಿರ್ಮಾಣವಾಗಿದೆ.
ಮತ್ತೊಂದೆಡೆ, ಸಿಟಿ ಮಾರ್ಕೆಟ್ ಈಗಾಗಲೇ ಸೀಲ್ಡೌನ್ ಆಗಿದ್ದು, ಮತ್ತೊಮ್ಮೆ ಠಾಣೆಯನ್ನು ಬಿಬಿಎಂಪಿ ಅಧಿಕಾರಿಗಳು ಸೀಲ್ಡೌನ್ ಮಾಡಿ ಸ್ಯಾನಿಟೈಸ್ ಮಾಡಿ ಕೊರೊನಾ ಸೋಂಕಿಗೆ ಒಳಗಾದವರ ಟ್ರಾವೆಲ್ ಹಿಸ್ಟರಿಯನ್ನು ಕಲೆ ಹಾಕುತ್ತಿದ್ದಾರೆ. ಪಶ್ಚಿಮ ವಿಭಾಗದ ಪೊಲೀಸರಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ, ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ಅವರು ವಾಕಿ ಮೂಲಕ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.