ಬೆಂಗಳೂರು : ವಿಳಾಸ ಕೇಳುವ ಸೋಗಿನಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಸರಗಳ್ಳರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಬ್ಯಾಂಕ್ ದರೋಡೆಗೆ ಯತ್ನಿಸಿ ವಿಫಲರಾಗಿರುವ ಸಂಗತಿಯೂ ಬೆಳಕಿಗೆ ಬಂದಿದೆ. ಬಂಧಿತರನ್ನು ಮಂಗಳೂರು ಮೂಲದ ಮೊಹಮ್ಮದ್ ರಫೀಕ್ ಹಾಗೂ ಶಿವಾಜಿನಗರ ಮೊಹಮ್ಮದ್ ಅನೀಸ್ ಎಂದು ಗುರುತಿಸಲಾಗಿದೆ.
ಅಕ್ಟೋಬರ್ 14ರಂದು ಜಯನಗರದ ಪಟ್ಟಾಭಿರಾಮನಗರದ 13ನೇ ಅಡ್ಡರಸ್ತೆಯಲ್ಲಿ ಬೈಕ್ ನಲ್ಲಿ ಬಂದಿದ್ದ ಆರೋಪಿಗಳು ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಚಿನ್ನದ ಸರವನ್ನು ಎಗರಿಸಿದ್ದರು. ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಂತೆ ವಿವಿಧ ಪ್ರಕರಣಗಳು ಹೊರಬಂದಿವೆ. ಆರೋಪಿಗಳ ಮೇಲೆ ಮಂಗಳೂರು, ಚಿಕ್ಕಮಗಳೂರು, ಬೆಂಗಳೂರಿನ ಶಂಕರಪುರ, ಹೆಚ್.ಎಸ್.ಆರ್ ಲೇಔಟ್, ಜೆ.ಪಿ.ನಗರ, ಬಸವನಗುಡಿ, ಕೆ.ಆರ್.ಮಾರ್ಕೆಟ್, ಬನ್ನೇರುಘಟ್ಟ ಸೇರಿದಂತೆ ಹಲವು ಕಡೆ ಸರಗಳ್ಳತನ ಮತ್ತು ದರೋಡೆ ಸೇರಿದಂತೆ 19 ಪ್ರಕರಣಗಳು ಈ ಆರೋಪಿಗಳ ಮೇಲಿರುವುದು ತಿಳಿದುಬಂದಿದೆ.
ಅಷ್ಟೇ ಅಲ್ಲ, 2017 ರಲ್ಲಿ ರಫೀಕ್ ಜೈಲಿನಿಂದ ಪರಾರಿಯಾಗಿ ಬಂದಿದ್ದ. ಅಕ್ಟೋಬರ್ 14ರಂದು ಮಹಿಳೆಯ ಸರಗಳ್ಳತನ ಬಳಿಕ, ಚಿನ್ನದ ಸರ ಮಾರಾಟ ಮಾಡಿ ಬಂದ ಹಣದಲ್ಲಿ ಬೆಂಗಳೂರಿನಿಂದ ಚಂದನ್, ಜಬಿ, ಮಣಿ, ನಿಯಾಜ್ ಎಂಬುವರನ್ನು ಕರೆದುಕೊಂಡು ಕಾರಿನಲ್ಲಿ ಉಡುಪಿ ಕಡೆಗೆ ಹೊರಡಲು ಯೋಜನೆ ರೂಪಿಸಿದ್ದರು. ಅಲ್ಲದೆ ಬೈಂದೂರಿನಲ್ಲಿ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ದರೋಡೆ ವಿಫಲ ಯತ್ನ ನಡೆಸಿದ್ದರು ಎಂದು ದಕ್ಷಿಣ ವಿಭಾಗ ಡಿಸಿಪಿ ಪಿ.ಕೃಷ್ಣಕಾಂತ್ ತಿಳಿಸಿದ್ದಾರೆ.
ಸದ್ಯ ಇಬ್ಬರು ಆರೋಪಿಗಳ ಬಂಧನದಿಂದ 4 ಸರಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಜಯನಗರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಮಿನಿ ಟ್ರ್ಯಾಕ್ಟರ್ ಪಲ್ಟಿ: ತಂದೆಗೆ ಊಟ ಕೊಡಲು ಹೊರಟಿದ್ದ ಬಾಲಕ ಸೇರಿ ಇಬ್ಬರು ಸಾವು