ಬೆಂಗಳೂರು: ಆರ್ಎಸ್ಎಸ್ ಮುಖಂಡನ ಸೋಗಿನಲ್ಲಿ ಹತ್ತಾರು ಅಮಾಯಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ್ದ ಆರೋಪಿ ಯುವರಾಜ್ ಸರಣಿ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ.
ಸಿನಿಮಾ ನಟ-ನಟಿಯರು, ರಾಜಕಾರಣಿಗಳಲ್ಲದೇ ರೌಡಿಗಳ ಜೊತೆ ನಂಟು ಹೊಂದಿದ್ದ ಎಂಬ ವಿಷಯ ಹರಿದಾಡುತ್ತಿದೆ. ಇಂತಹ ವಿಚಾರಕ್ಕೆ ಮತ್ತಷ್ಟು ಪುಷ್ಟಿ ಎಂಬಂತೆ ವಂಚನೆಗೊಳಗಾದ ವ್ಯಕ್ತಿಯೊಬ್ಬರು ತಮ್ಮ ದೂರಿನಲ್ಲಿ ರೌಡಿಗಳ ವಿಚಾರವನ್ನು ಉಲ್ಲೇಖಿಸಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ. ಕೆಲಸ ಕೊಡಿಸುವುದಾಗಿ ಹೇಳಿ ಪ್ರತ್ಯೇಕವಾಗಿ ಇಬ್ಬರಿಗೆ 1.05 ಕೋಟಿ ರೂಪಾಯಿ ವಂಚನೆ ಎಸಗಿರುವ ಯುವರಾಜ್ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಾಜಿನಗರದ ವೈದ್ಯ ನರಸಿಂಹ ಸ್ವಾಮಿ ತಮ್ಮ ಮಗನಿಗೆ ಸರ್ಕಾರಿ ಎಇಇ ಹುದ್ದೆ ಕೊಡಿಸುವ ಸಲುವಾಗಿ ಯುವರಾಜ್ನನ್ನು ಸಂಪರ್ಕಿಸಿದ್ದರು. ಆಗ ಯುವರಾಜ್ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಹುದ್ದೆಗೆ 75 ಲಕ್ಷ ನೀಡುವಂತೆ ಡಿಮ್ಯಾಂಡ್ ಮಾಡಿದ್ದ. ಆದರೆ ಅದು ಸಾಧ್ಯವಾಗದೇ ಇದ್ದಾಗ, ವೈದ್ಯ ನರಸಿಂಹ ಸ್ವಾಮಿ ಹಣ ವಾಪಸ್ಸು ಕೊಡುವಂತೆ ತಿಳಿಸಿದ್ದರು. ಈ ವೇಳೆ ವಂಚಕ ಯುವರಾಜ್ ಹಣ ನೀಡಲು ನಿರಾಕರಿಸಿದ್ದು, ಇನ್ನೊಮ್ಮೆ ಹಣ ಕೇಳಿದರೆ ರೌಡಿಗಳಿಗೆ ಸುಪಾರಿ ಕೊಟ್ಟು ಹತ್ಯೆ ಮಾಡಿಸುತ್ತೇನೆ ಎಂದು ಧಮ್ಕಿ ಹಾಕಿದ್ದ ಎನ್ನುವ ಆರೋಪ ಕೇಳಿಬಂದಿದೆ.
ತಿಂಗಳಿಗೆ 80 ಸಾವಿರ ಸಂಬಳದ ಆಸೆ ತೋರಿಸಿ ಕೈಕೊಟ್ಟ..?
ಇನ್ನೊಂದೆಡೆ ಸಣ್ಣ ಹೋಟೆಲ್ ನಡೆಸುತ್ತಿದ್ದ ಗೋವಿಂದಯ್ಯ ಎಂಬುವರನ್ನು ಭೇಟಿಯಾಗಿದ್ದ ಯುವರಾಜ್, ಬಳಿಕ ಕರ್ನಾಟಕ ಮಿಲ್ಕ್ ಫೆಡರೇಷನ್ (ಕೆಎಂಎಫ್) ನಲ್ಲಿ ಮ್ಯಾನೇಜರ್ ಹುದ್ದೆಯಿದ್ದು, ತಿಂಗಳಿಗೆ 80 ಸಾವಿರ ಸಂಬಳ ಇದೆ, 30 ಲಕ್ಷ ಕೊಟ್ಟರೆ ನಿಮ್ಮ ಅಳಿಯನಿಗೆ ಆ ಹುದ್ದೆ ಕೊಡಿಸುತ್ತೇನೆ ಎಂದು ಗೋವಿಂದಯ್ಯನಿಗೆ ಆಮಿಷ ತೋರಿಸಿದ್ದ ಎನ್ನಲಾಗಿದೆ.
ಯುವರಾಜ್ನ ಬಣ್ಣ-ಬಣ್ಣದ ಮಾತುಗಳನ್ನು ನಂಬಿದ್ದ ಗೋವಿಂದಯ್ಯ, ಒಟ್ಟು 30 ಲಕ್ಷ ಹಣ ನೀಡಿದ್ದರು ಎನ್ನಲಾಗಿದ್ದು, ಕೆಲಸದ ಆದೇಶದ ಪ್ರತಿ ಬರಲಿದೆ ಎಂದು ಯಾಮಾರಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ವೈದ್ಯರ ಮಗನಿಗೆ ಎಇಇ ಹುದ್ದೆ ಕೊಡಿಸೋದಾಗಿ 75 ಲಕ್ಷ ವಂಚನೆ ಹಾಗೂ ಕೆಎಂಎಫ್ನ ಮ್ಯಾನೇಜರ್ ಹುದ್ದೆ ಹೆಸರಿನಲ್ಲಿ 30 ಲಕ್ಷ ವಂಚನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿವೆ.
ಇದನ್ನೂ ಓದಿ: ಯುವರಾಜ್ ಮೇಲೆ ಮತ್ತೊಂದು ಪ್ರಕರಣ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್ ಹೆಸರಿನಲ್ಲಿ ವಂಚನೆ!