ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಮನೆ ಮೇಲೆ ಸಿಸಿಬಿ ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು, ಮಹಿಳಾ ಅಧಿಕಾರಿ ಅಂಜುಮಾಳ ನೇತೃತ್ವದಲ್ಲಿ ಮುಂಜಾನೆಯಿಂದ ಪರಿಶೀಲನೆ ಚುರುಕುಗೊಂಡಿದೆ. ತನಿಖಾ ದೃಷ್ಟಿಯಿಂದ ರಾಗಿಣಿ ಬಳಿಯಿದ್ದ ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದ್ದು, ರಾಗಿಣಿಗೆ ಸಂಕಷ್ಟ ಎದುರಾಗಿದೆ.
ಈಗಾಗಲೇ ಸಿಸಿಬಿ ಪೊಲೀಸರು ರಾಗಿಣಿ ಆಪ್ತ ರವಿಶಂಕರ್ನನ್ನು ಬಂಧಿಸಿದ್ದು, ನಟಿ ಜೊತೆ ಯಾವ ರೀತಿಯ ಸಂಪರ್ಕ ಇತ್ತು, ಏನೆಲ್ಲಾ ವ್ಯವಹಾರಗಳು ಇದ್ದವು ಎನ್ನುವ ಮಾಹಿತಿಯನ್ನು ರವಿಶಂಕರ್ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ರವಿಶಂಕರ್ ಡ್ರಗ್ಸ್ ಪೆಡ್ಲರ್ ಆಗಿರುವುದಕ್ಕೆ ಕೆಲ ದಾಖಲೆಗಳು ಕೂಡ ಸಿಸಿಬಿ ಪೊಲೀಸರಿಗೆ ಸಿಕ್ಕಿದೆ ಎಂದು ಹೇಳಲಾಗಿದೆ. ತನಿಖೆ ವೇಳೆ ರವಿಶಂಕರ್ ಬಳಿ ಮೂರು ಮೊಬೈಲ್ಗಳು ಇದ್ದವು. ಆದರೆ ಸದ್ಯ ಎರಡು ಮೊಬೈಲ್ ಮಾತ್ರ ಪತ್ತೆಯಾಗಿದ್ದು, ಇನ್ನೊಂದು ಮೊಬೈಲ್ಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ನಟಿ ರಾಗಿಣಿಗೂ ಮೊಬೈಲ್ಗಳಿಂದಲೇ ಸಂಕಷ್ಟ ಎದುರಾಗಬಹುದು. ಯಾಕಂದರೆ ಯಾರ ಬಳಿಯಾದರೂ ಡ್ರಗ್ಸ್ ವಿಚಾರ ಕಮ್ಯುನಿಕೇಟ್ ಮಾಡಿದ್ದರೆ ಆ ವಿಚಾರ ಬಯಲಾಗುವ ಸಾಧ್ಯತೆ ಇದೆ. ಒಂದು ವೇಳೆ ಹಾಗೆ ಕಮ್ಯುನಿಕೇಟ್ ಮಾಡಿ ಮೆಸೇಜ್ ಡಿಲೀಟ್ ಮಾಡಿದರೂ ಕೂಡ ಸಿಸಿಬಿ ಪೊಲೀಸರು ಮೊಬೈಲ್ನಿಂದ ಹೆಚ್ಚಿನ ಮಾಹಿತಿ ಸಂಗ್ರಹಣೆಗೆ ಅದನ್ನು ಎಫ್ಎಸ್ಎಲ್ಗೆ ಕಳುಹಿಸಿ, ಮೊಬೈಲ್ ರಿಟ್ರೀವ್ ಮಾಡುವ ಸಾಧ್ಯತೆಗಳಿವೆ.