ಬೆಂಗಳೂರು : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಎಸ್ ಬಿ ಮಿನರಲ್ಸ್ ಒಡೆತನದ ಎರಡು ಗಣಿ ಕಂಪನಿಗೆ ಸೇರಿದ 5. 21 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದುಕೊಂಡಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಬಿ. ಪಿ ಆನಂದ್ ಕುಮಾರ್, ಪಾಂಡುರಂಗ ಸಿಂಗ್, ಗೋಪಾಲ್ ಸಿಂಗ್ ಪಾಲುದಾರಿಕೆಯ ಎಸ್‌ಬಿ ಮಿನರಲ್ಸ್, ದಿನೇಶ್ ಕುಮಾರ್ ಪಾಲುದಾರಿಕೆಯ ಭಾರತ್ ಮಿನರಲ್ಸ್ ಮೈನ್ಸ್ ಹಾಗೂ ಶಾಂತಲಕ್ಷ್ಮಿ ಮತ್ತು ಜೆ. ಮಿಥಿಲೇಶ್ವರ್ ಗಣಿ ಸಂಸ್ಥೆಗಳಿಗೆ ಸೇರಿದ 5.21 ಕೋಟಿ ರೂ. ಮೌಲ್ಯದ 6 ಸ್ಥಿರ ಆಸ್ತಿಗಳನ್ನು ಇಡಿ ಜಪ್ತಿ ಮಾಡಿದೆ.
ಈ ಎರಡು ಕಂಪನಿಗಳು ಕಬ್ಬಿಣದ ಅದಿರನ್ನು ಪರವಾನಗಿ ಇಲ್ಲದೆ ಅಕ್ರಮವಾಗಿ ಬೇರೆಡೆ ಸಾಗಾಟ ನಡೆಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ್ದವು. ಲೋಕಾಯುಕ್ತದ ವಿಶೇಷ ತನಿಖಾ ತಂಡ (ಎಸ್‌ಐಟಿ) ಎಸ್‌ಬಿ ಮಿನರಲ್ ಎಂಟರ್ಪ್ರೈಸಸ್ ಲಿಮಿಟೆಡ್, ಅಕ್ರಮದಲ್ಲಿ ಶಾಮೀಲಾದ ಸರ್ಕಾರಿ ನೌಕರರು ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿತ್ತು. ತನಿಖೆ ವೇಳೆ ಭಾರಿ ಮೊತ್ತದ ಅಕ್ರಮ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿತ್ತು. ಈ ಸಂಗತಿ ಇಡಿ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಲೋಕಾಯುಕ್ತ ದಾಖಲಿಸಿಕೊಂಡ ಎಫ್‌ಐಆರ್ ಆಧರಿಸಿ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಅಕ್ರಮದ ಜಾಡು ಹಿಡಿಯಲು ಸಿದ್ಧತೆ : ಈ ನಡುವೆ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ಕೇಂದ್ರ ಸಶಕ್ತ ಸಮಿತಿ ರಚಿಸಿತ್ತು. ಅದರಂತೆ ನಡೆದ ತನಿಖೆ ವೇಳೆ 4 ಮೈನಿಂಗ್ ಸಂಸ್ಥೆಗಳು ಅಕ್ರಮ ನಡೆಸಿರುವುದು ಬೆಳಕಿಗೆ ಬಂದಿದೆ. ಇಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಇನ್ನಷ್ಟು ಅಕ್ರಮದ ಜಾಡು ಹಿಡಿಯಲು ಸಿದ್ಧತೆ ನಡೆಸಿದೆ ಎನ್ನಲಾಗ್ತಿದೆ.
ಲಂಚ; ಪಂಚಾಯತ್ ಅಧಿಕಾರಿಗಳು ಲೋಕಾಯುಕ್ತ ಬಲೆಗೆ: ಇನ್ನೊಂದೆಡೆ ಮನೆ ಕಟ್ಟಲು ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವಾಗ ಚಡಚಣ ಪಟ್ಟಣ ಪಂಚಾಯಿತಿಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ತನಿಖಾಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಜ್ಯೂನಿಯರ್ ಪ್ರೋಗ್ರಾಮರ್ ನಾಗರಾಜ್ ಅಶೋಕ ಕುಲಕರ್ಣಿ ಹಾಗೂ ದ್ವಿತೀಯ ದರ್ಜೆ ನೌಕರ ಶಿವಾನಂದ ಕಲ್ಲಪ್ಪ ಜಂಗಲಗಿ ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಇವರು ವ್ಯಕ್ತಿಯೊಬ್ಬರಿಗೆ ಮನೆ ಕಟ್ಟುವ ಪರವಾನಗಿ ಪತ್ರ ನೀಡಲು ಒಂದನೇ ಅಂತಸ್ತಿಗೆ 20 ಸಾವಿರ ರೂಪಾಯಿ ಲಂಚ ಪಡೆದುಕೊಂಡಿದ್ದರು. ಮತ್ತೆ 7 ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ವ್ಯಕ್ತಿಯೊಬ್ಬರು ವಿಜಯಪುರ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು.
ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಶನಿವಾರ ಚಡಚಣ ಪಟ್ಟಣ ಪಂಚಾಯತಿ ಹೊರಗಡೆ ಇಬ್ಬರು ಅಧಿಕಾರಿಗಳು ದೂರುದಾರರಿಂದ ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿ ಹಣದ ಸಮೇತ ಸೆರೆ ಹಿಡಿದಿದ್ದಾರೆ. ಆರೋಪಿಗಳ ವಿರುದ್ಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮನೆ ಕಟ್ಟಲು ಅನುಮತಿಗೂ ಲಂಚ: ಪಂಚಾಯತ್ ಅಧಿಕಾರಿಗಳು ಲೋಕಾಯುಕ್ತ ಬಲೆಗೆ