ಬೆಂಗಳೂರು: ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಗರದ ಬಿಡಿಎ ಟೋಲ್ ಬಳಿ ಘಟನೆ ಸಂಭವಿಸಿದೆ.
ಸುಮುಖ್ (22) ಹಾಗೂ ಲೀನಾನಾಯ್ದು (19) ಎಂಬುವರೆ ಸಾವನ್ನಪ್ಪಿದ್ದವರು. ಕಾರು ಚಲಾಯಿಸುತ್ತಿದ್ದ ಸುಮುಖ್ ತನ್ನ ಸ್ನೇಹಿತೆ ಲೀನಾನಾಯ್ಡುರನ್ನು ಕರೆದುಕೊಂಡು ನೈಸ್ ರಸ್ತೆಯಲ್ಲಿ ಪಿಇಎಸ್ ಕಾಲೇಜ್ ಕಡೆಯಿಂದ ಸೋಂಪುರ ಕಡೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಅತಿ ವೇಗದ ಚಾಲನೆಯೇ ಅವಘಡಕ್ಕೆ ಕಾರಣವಾಗಿದ್ದು, ಎದುರಿನಿಂದ ಬರುತ್ತಿದ್ದ ಬಸ್ಗೆ ಕಾರು ಡಿಕ್ಕಿ ಹೊಡೆದು, ಎರಡೂ ವಾಹನಗಳು ಪಲ್ಟಿಯಾಗಿವೆ.
ಕಾರಿನಲ್ಲಿದ್ದ ಇಬ್ಬರೂ ತೀವ್ರ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬಸ್ ಚಾಲಕನ ಕಾಲಿಗೂ ಗಂಭೀರ ಗಾಯಗಳಾಗಿದ್ದು, ಇತರ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಾರು ಡಿಕ್ಕಿಯಾದ ರಭಸಕ್ಕೆ ಟೈರ್ ಕಳಚಿಕೊಂಡು ಮುಂದೆ ಹೋಗುತ್ತಿದ್ದ ಮತ್ತೊಂದು ಕಾರಿನ ಹಿಂಭಾಗಕ್ಕೆ ತಗುಲಿ ಜಖಂ ಆಗಿದೆ. ಸದ್ಯ ಕೆಂಗೇರಿ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ವಿವಾಹ ನೋಂದಣಿ ಕಚೇರಿ ಸಮೀಪಿಸುತ್ತಿದ್ದಂತೆ ಯುವಕ ಪರಾರಿ.. ಪ್ರೀತಿಸಿದಾಕೆ ಕಂಗಾಲು!