ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದ್ದಂತೆ, ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯು ಏರುತ್ತಲೇ ಇದೆ. ಇಂದು ಕೂಡ ಕೊರೊನಾಗೆ ಇಬ್ಬರು ಬಲಿಯಾಗಿದ್ದು, ಮೃತರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ 65 ವರ್ಷದ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿದ್ದು, ರೋಗಿಯು ಮಧುಮೇಹ, ರಕ್ತದೊತ್ತಡ, ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದರು. ಜೂನ್ 3 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಜೂನ್ 8 ರಂದು ಸಾವನ್ನಪ್ಪಿದ್ದಾರೆ.
ಮತ್ತೊಬ್ಬರು ಕಲಬುರಗಿ ನಿವಾಸಿ 17 ವರ್ಷದ ಯುವತಿ ಸಾವನ್ನಪ್ಪಿದ್ದು, ನರ ಸಂಬಂಧಿ ಕಾಯಿಲೆಯಿಂದ ಜೂನ್ 4 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಅಂದೇ ನಿಧನ ಹೊಂದಿದ್ದಾರೆ. ಇವರು ಇದುವರೆಗೆ ಕರ್ನಾಟಕದಲ್ಲಿ ಕೋವಿಡ್ 19 ನಿಂದ ಸಾವನ್ನಪ್ಪಿದವರಲ್ಲಿ ಅತೀ ಚಿಕ್ಕ ವಯಸ್ಸಿನ ಸೋಂಕಿತೆ ಆಗಿದ್ದಾರೆ.
ಇಂದು ರಾಜ್ಯದಲ್ಲಿ ಹೊಸ 161 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 5,921ಕ್ಕೆ ಏರಿಕೆ ಆಗಿದೆ. ಇದರಲ್ಲಿ 24 ಮಂದಿ ಅಂತಾರಾಷ್ಟ್ರೀಯ, 91 ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿರುವವರಾಗಿದ್ದಾರೆ. ಇನ್ನು ಕಳೆದ ಮೂರು ತಿಂಗಳ ಅವಧಿಯಲ್ಲಿ ಗ್ರೀನ್ ಝೋನ್ನಲ್ಲಿದ್ದ ಚಾಮರಾಜನಗರದಲ್ಲಿ ಇಂದು ಮೊದಲ ಕೊರೊನಾ ಸೋಂಕು ಪತ್ತೆಯಾಗಿದೆ. P-5919, 22 ವರ್ಷದ ಯುವಕನಿಗೆ ಸೋಂಕು ತಗುಲಿದ್ದು, ಮಹಾರಾಷ್ಟ್ರದಿಂದ ಹಿಂದಿರುಗಿದ್ದು, ಸದ್ಯ ಚಾಮರಾಜನಗರದ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಸೋಂಕಿತರಿಗಿಂತ ಡಿಸ್ಚಾರ್ಜ್ ಆದವರೇ ಹೆಚ್ಚು
ಇಂದು ಒಂದೇ ದಿನ 164 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾದವರು ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 2,605 ಮಂದಿ ಗುಣಮುಖರಾಗಿದ್ದಾರೆ. 12 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ 4,00,257 ಮಂದಿಗೆ ಕೊರೊನಾ ಪರೀಕ್ಷೆ ಮಾಡಿದ್ದು, 5,921 ಮಂದಿಯಲ್ಲಿ ಪಾಸಿಟಿವ್ ಕೇಸ್ ಪತ್ತೆಯಾಗಿದೆ. 42,500 ಮಂದಿ ಕ್ವಾರಂಟೈನ್ನಲ್ಲಿದ್ದು ಇದರಲ್ಲಿ 24,408 ಪ್ರಥಮ ಸಂಪರ್ಕ, 18,092 ದ್ವಿತೀಯ ಸಂಪರ್ಕದವರಾಗಿದ್ದಾರೆ.
ಅತೀ ಹೆಚ್ಚು ಸೋಂಕಿತರಿದ್ದ ಉಡುಪಿ, ಕಲಬುರಗಿ ಜೊತೆಗೆ ಇದೀಗ ಯಾದಗಿರಿ ಸೇರಿಕೊಂಡಿದೆ. 642 ಸೋಂಕಿತರು ಯಾದಗಿರಿಯಲ್ಲಿ ಇದ್ದು, ಇವರೆಗೆ ಕೇವಲ 91 ಮಂದಿ ಅಷ್ಟೇ ಗುಣಮುಖರಾಗಿದ್ದಾರೆ. ಉಳಿದ 550 ಮಂದಿ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇಂದು ಪತ್ತೆಯಾಗಿರುವ ಪ್ರಕರಣಗಳಲ್ಲಿ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಪ್ರಯಾಣ ಹಿನ್ನೆಲೆಯಿದೆ.