ಬೆಂಗಳೂರು : ಆಟೋ ರಿಕ್ಷಾಗಳನ್ನು ಕದ್ದು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದು, ಮತ್ತೊಂದೆಡೆ ಸಿಸಿಬಿಯ ಪೂರ್ವ ವಿಭಾಗದ ಸಂಘಟಿತ ಅಪರಾಧ ದಳದ ಅಧಿಕಾರಿಗಳು ದರೋಡೆಗೆ ಸಂಚು ರೂಪಿಸಿದ್ದ ಆರು ಜನರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಆಟೋ ರಿಕ್ಷಾಗಳ ಕಳ್ಳತನ ಪ್ರಕರಣದಲ್ಲಿ ಜಾವೀದ್ ಹಾಗೂ ಸೈಯದ್ ನದೀಮ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಒಟ್ಟು 7.50 ಲಕ್ಷ ಮೌಲ್ಯದ ಮೂರು ಆಟೋ ರಿಕ್ಷಾಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಮೈಸೂರಿನಲ್ಲಿ ಆಟೋ ಡೀಲರ್ ಆಗಿದ್ದ ಜಾವೀದ್, ಸಾಲ ಮಾಡಿಕೊಂಡು ಬೆಂಗಳೂರಿಗೆ ಬಂದು ನೆಲೆಸಿದ್ದ. ಇದೇ ಸಂದರ್ಭದಲ್ಲಿ ಮಗನ ಸ್ನೇಹಿತನಾಗಿದ್ದ ಆಟೋ ಚಾಲಕ ಸೈಯದ್ ನದೀಂ ಪರಿಚಯವಾಗಿತ್ತು. ಆಟೋಗಳನ್ನು ಕದ್ದು ಮಾರಾಟ ಮಾಡುವ ಉಪಾಯವನ್ನು ಸೈಯದ್ ನದೀಂಗೆ ಜಾವೀದ್ ತಿಳಿಸಿದ್ದನು. ಅದರಂತೆ ಇಬ್ಬರೂ ಸೇರಿ ರಾತ್ರಿ ರಸ್ತೆ ಬದಿ ನಿಲ್ಲಿಸುವ ಆಟೋಗಳನ್ನು ಕಳ್ಳತನ ಮಾಡಲಾರಂಭಿಸಿದ್ದರು. ಇದೇ ರೀತಿ ಎರಡು ಆಟೋಗಳನ್ನ ಕದ್ದು, ಅವುಗಳ ನಂಬರ್ ಪ್ಲೇಟ್ ಬದಲಿಸಿ ಮೈಸೂರಿಗೆ ಕೊಂಡೊಯ್ದು ಮಾರಾಟ ಮಾಡಿದ್ದರು.
ಡಿಸೆಂಬರ್ 11ರಂದು ಗಿರಿನಗರ ವ್ಯಾಪ್ತಿಯಲ್ಲಿ ಆಟೋ ರಿಕ್ಷಾವನ್ನು ಕಳ್ಳತನ ಮಾಡಿದ್ದರ ಕುರಿತು ಪ್ರಕರಣ ದಾಖಲಾಗಿತ್ತು. ಇತ್ತ ಕದ್ದ ಆಟೋವನ್ನು ಮೈಸೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳು, ಗಿರಾಕಿಗಳು ಸಿಗದ ಕಾರಣ ಬೆಂಗಳೂರಿಗೆ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಆದರೆ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದರೋಡೆಗೆ ಸಂಚು ರೂಪಿಸಿದ್ದ ಆರು ಜನರ ಬಂಧನ : ಸಾರ್ವಜನಿಕರನ್ನು ಬೆದರಿಸಿ ಸುಲಿಗೆ ಮಾಡಲು ಹೊಂಚು ಹಾಕುತ್ತಿದ್ದ ಆರು ಜನ ಆರೋಪಿಗಳನ್ನು ಸಿಸಿಬಿಯ ಪೂರ್ವ ವಿಭಾಗದ ಸಂಘಟಿತ ಅಪರಾಧ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಪವನ್, ನಿತಿನ್, ಯತೀಂದ್ರ, ಲೋಕೇಶ್, ಚಂದನ್ ಹಾಗೂ ದರ್ಶನ್ ಬಂಧಿತ ಆರೋಪಿಗಳು.
ಡಿಸೆಂಬರ್ 30ರಂದು ಗೋವಿಂದಪುರ ಠಾಣಾ ವ್ಯಾಪ್ತಿಯ ವೀರಣ್ಣಪಾಳ್ಯದ ಹಿಂದೂ ರುದ್ರಭೂಮಿ ರಸ್ತೆಯಲ್ಲಿ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪಿಗಳು, ಮಾರಕಾಸ್ತ್ರಗಳನ್ನು ಹಿಡಿದು ಸುಲಿಗೆಗೆ ನಿಂತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಮಾರಕಾಸ್ತ್ರಗಳು, ಮೂರು ದ್ವಿಚಕ್ರ ವಾಹನಗಳನ್ನ ಜಪ್ತಿ ಮಾಡಲಾಗಿದೆ.
ಆರೋಪಿಗಳ ವಿರುದ್ಧ ಈ ಮುಂಚೆ ಕೆ.ಜಿ ಹಳ್ಳಿ ಠಾಣೆಯಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿರುವುದು ತನಿಖೆಯ ವೇಳೆ ತಿಳಿದು ಬಂದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬೆಳಗಾವಿ: ವರದಕ್ಷಿಣೆ ದುರಾಸೆ, ಜೈಲು ಪಾಲಾದ ಸರ್ಕಾರಿ ನೌಕರ