ಬೆಂಗಳೂರು: ನಾಳೆಯೊಳಗೆ ಎರಡೂವರೆ ಸಾವಿರ ಬೆಡ್ ವ್ಯವಸ್ಥೆ ಮಾಡಲೇಬೇಕು ಎಂದು ಖಾಸಗಿ ಆಸ್ಪತ್ರೆ ಮಾಲೀಕರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಹಾಸಿಗೆ ಮೀಸಲಿಡುವ ಸಂಬಂಧ ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಮ್ಮಲ್ಲಿ ಹಾಸಿಗೆಯ ಕೊರತೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ 2,500 ಬೆಡ್ಗಳನ್ನು ಕೊರೊನಾ ರೋಗಿಗಳಿಗೆ ಸಿದ್ಧ ಮಾಡಿಟ್ಟುಕೊಳ್ಳಲು ಸೂಚಿಸಲಾಗಿದೆ. ಸರ್ಕಾರದ ಜೊತೆ ಸಹಕರಿಸಲು ಹೇಳಲಾಗಿದೆ. ಎಲ್ಲಾ ಆಸ್ಪತ್ರೆಗಳ ಮಾಲೀಕರ ಜೊತೆ ಚರ್ಚೆ ಮಾಡಿದ್ದೇವೆ. ನಾವು ಸಭೆಯಿಂದ ಹೊರಗೆ ಬಂದಿದ್ದೇವೆ. ಅವರು ಚರ್ಚೆ ಮಾಡಿ ನಿರ್ಧಾರ ಮಾಡಲು ಅವಕಾಶ ಕೊಟ್ಟಿದ್ದೇವೆ. ಅವರು ಚರ್ಚಿಸಿ ನಿರ್ಧಾರ ಹೇಳುತ್ತಾರೆ ಎಂದರು.
ಬೆಂಗಳೂರಿನಲ್ಲಿ ಕೊರೊನಾ ತಡೆಯಲು ಯಶಸ್ವಿಯಾಗಿದ್ದೇವೆ. ದೇಶದ ಬೇರೆ ನಗರಗಳಿಗೆ ಹೋಲಿಸಿದ್ರೆ, ನಗರದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಜನ ಗಾಬರಿ ಹಾಗೂ ಆತಂಕ ಪಡಬೇಕಿಲ್ಲ ಎಂದು ತಿಳಿಸಿದರು.
ಮುಂಬೈನಲ್ಲಿ 74,252 ಜನ ಕೊರೊನಾ ಸೋಂಕಿತರಿದ್ದು, ಇದರಲ್ಲಿ 42,329 ಜನ ಗುಣಮುಖರಾಗಿದ್ದಾರೆ. 4284 ಸಾವನ್ನಪ್ಪಿದ್ದಾರೆ. ಇನ್ನು ನವದೆಹಲಿಯಲ್ಲಿ 80,188 ಜನ ಸೋಂಕಿತರಿದ್ದು, ಗುಣಮುಖ 49,301, ಸಾವು 2558 ಆಗಿದೆ ಎಂದರು.
ಚೆನ್ನೈನಲ್ಲಿ 51,699 ಸೋಂಕಿತರು, ಗುಣಮುಖ 31,045, 733 ಜನರು ಸಾವನ್ನಪ್ಪಿದ್ದಾರೆ. ಕೊಲ್ಕತ್ತಾದಲ್ಲಿ 5402 ಜನರಿಗೆ ಪಾಸಿಟಿವ್ ಇದ್ದರೆ, 3123 ಜನ ಗುಣಮುಖ, 359 ಜನ ಸಾವನ್ನಪ್ಪಿದ್ದಾರೆ. ಆದರೆ ಬೆಂಗಳೂರಿನಲ್ಲಿ ಸೋಂಕಿತರು 3321 ಇದ್ದು, 81 ಜನರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ವಿವರಿಸಿದರು.
ಸಭೆಯಲ್ಲಿ ಸಿಎಂ ನೀಡಿದ ಸೂಚನೆ ಏನು..?
ಖಾಸಗಿ ಆಸ್ಪತ್ರೆಗಳ ಜೊತೆ ಸರ್ಕಾರದ ಸಭೆಯಲ್ಲಿ ನಾಳೆ ಅಭಿಪ್ರಾಯ ಹೇಳುತ್ತೇವೆ ಎಂದು ಖಾಸಗಿ ಆಸ್ಪತ್ರೆಗಳ ವ್ಯವಸ್ಥಾಪಕರು ಮನವಿ ಮಾಡಿದ್ದಾರೆ. ಆಗ ಸಿಎಂ ಬೇಡ, ಈಗಲೇ ಇಲ್ಲೇ ತೀರ್ಮಾನ ಮಾಡಿ, ನಾವು ಹೊರಗೆ ಹೋಗುತ್ತೇವೆ, ಈಗಲೇ ತೀರ್ಮಾನ ಮಾಡಿ ಹೇಳಲೇಬೇಕು ಎಂದು ಹೇಳಿ ಸಚಿವರ ಜೊತೆ ಸಭೆಯಿಂದ ಹೊರ ಬಂದರು.
ನಮ್ಮಲ್ಲೂ ಸಮಸ್ಯೆಗಳಿವೆ, ಎಲ್ಲಾ ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ನೀಡುವಷ್ಟು ಸಾಮರ್ಥ್ಯ ಇಲ್ಲ ಎಂದು ಖಾಸಗಿ ಆಸ್ಪತ್ರೆಗಳು ತಮ್ಮ ಅವಲತ್ತುಕೊಂಡಿದ್ದಾರೆ. ಸಮಸ್ಯೆಗಳು ಇದ್ದೇ ಇದೆ, ಅದರೆ ನಾಳೆಯೊಳಗೆ ನಮಗೆ ಎರಡೂವರೆ ಸಾವಿರ ಬೆಡ್ ಸಿಗಲೇಬೇಕು, ಸಮಸ್ಯೆಗಳನ್ನು ಪರಿಹಾರ ಮಾಡೋಣ, ನಿಮ್ಮ ನಿರ್ಧಾರ ಈಗಲೇ ಸರ್ಕಾರಕ್ಕೆ ತಿಳಿಸಬೇಕು ಎಂದು ಸಭೆಯಲ್ಲೇ ಸ್ಪಷ್ಟವಾಗಿ ಸೂಚನೆ ನೀಡಿದರು.
ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಮತ್ತು ನಾನ್ ಕೋವಿಡ್ ಎಂದು ನಿಗದಿಪಡಿಸಿ, ಒಂದೇ ಆಸ್ಪತ್ರೆಯಲ್ಲಿ ಕೋವಿಡ್ ಮತ್ತು ನಾನು ಕೋವಿಡ್ ಚಿಕಿತ್ಸೆ ಕಷ್ಟ ಎಂದ ಖಾಸಗಿ ಆಸ್ಪತ್ರೆಗಳು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾಕೆ ಆಗಲ್ಲ, ನಾವು ಈಗ ವಿಕ್ಟೋರಿಯಾ, ಬೌರಿಂಗ್ನಲ್ಲಿ ಚಿಕಿತ್ಸೆ ನೀಡುತ್ತಿಲ್ಲವೇ ಎಂದು ರಾಜ್ಯ ಸರ್ಕಾರ ಪ್ರಶ್ನಿಸಿದೆ.
ಸಭೆಗೆ ಶ್ರೀರಾಮುಲು ಗೈರು..!
ಈ ಸಭೆಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ಗೈರಾಗಿದ್ದಾರೆ. ಖಾಸಗಿ ಆಸ್ಪತ್ರೆಗಳ ವೈದ್ಯ ಮುಖ್ಯಸ್ಥರು, ಆರ್. ಅಶೋಕ್, ಡಿಸಿಎಂ ಅಶ್ವತ್ಥ್ ನಾರಾಯಣ, ಗೃಹ ಸಚಿವ ಬೊಮ್ಮಾಯಿ ಭಾಗಿಯಾಗಿದ್ದಾರೆ. ಆದರೆ ಆರೋಗ್ಯ ಸಚಿವರು ಗೈರಾಗಿದ್ದು, ಎಲ್ಲವೂ ಸರಿ ಇಲ್ಲ ಅನ್ನೋದನ್ನು ಮತ್ತೆ ಸಾಬೀತು ಪಡಿಸಿದೆ. ಪ್ರಮುಖ ಸಭೆಗಳಿಗೆ ಸಚಿವ ಶ್ರೀರಾಮುಲು ನಿರಂತರವಾಗಿ ಗೈರಾಗುತ್ತಿದ್ದಾರೆ.