ಬೆಂಗಳೂರು: ಕರ್ನಾಟಕ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ವಿಜಯಕುಮಾರ್ ಅದಗೌಡ ಪಾಟೀಲ್ ಹಾಗೂ ರಾಜೇಶ್ ರೈ ಕಲ್ಲಂಗಳ ಅವರು ಪದವಿಯ ಅಧಿಕಾರ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಿನ್ನೆ (ಗುರುವಾರ) ಇಂದು ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಪದವಿಯ ಅಧಿಕಾರ ಪ್ರಮಾಣ ವಚನವನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಮತ್ತಿತರರು ಇದ್ದರು.
ಐವರು ನ್ಯಾಯಮೂರ್ತಿಗಳ ನೇಮಕ: ಸುಪ್ರೀಂಕೋರ್ಟ್‌ಗೆ ಐವರು ಹೊಸ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸನ್ನು ಕೇಂದ್ರ ಸರ್ಕಾರ ಶನಿವಾರ(ಫೆ.4) ಅಂಗೀಕರಿಸಿದೆ. ಅವರಲ್ಲಿ ನ್ಯಾಯಮೂರ್ತಿ ಪಂಕಜ್ ಮಿಥಾಲ್ -ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ನ್ಯಾಯಮೂರ್ತಿ ಸಂಜಯ್ ಕರೋಲ್ ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ನ್ಯಾಯಮೂರ್ತಿ ಪಿ.ವಿ. ಸಂಜಯ್ ಕುಮಾರ್- ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ - ನ್ಯಾಯಮೂರ್ತಿ, ಪಾಟ್ನಾ ಹೈಕೋರ್ಟ್ ಮತ್ತು ನ್ಯಾ. ಮನೋಜ್ ಮಿಶ್ರಾ, ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಗಳನ್ನಾಗಿ ನೇಮಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು.
ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ಡಿಸೆಂಬರ್ 13 ರಂದು ಈ ಐದು ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ನ್ಯಾಯಾಂಗ ಮತ್ತು ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಒಂದು ದಿನದ ನಂತರ, ಮೋದಿ ಸರ್ಕಾರ ಈ ಪ್ರಸ್ತಾವಕ್ಕೆ ಒಪ್ಪಿಗೆ ಕೊಟ್ಟಿದೆ.
ಇದನ್ನೂ ಓದಿ: ಐವರು ನ್ಯಾಯಮೂರ್ತಿಗಳ ನೇಮಕ: ಸುಪ್ರೀಂ ಕೊಲಿಜಿಯಂ ಶಿಫಾರಸಿಗೆ ಅಂಗೀಕಾರದ ಮುದ್ರೆ ಒತ್ತಿದ ಕೇಂದ್ರ ಸರ್ಕಾರ
ಪ್ರತಿಯೊಂದು ಪ್ರಕರಣವೂ ಮುಖ್ಯ: ಎಲ್ಲರಿಗೂ ನ್ಯಾಯ ದೊರೆಯುವಂತೆ ಮಾಡಲು ಸುಪ್ರೀಂ ಕೋರ್ಟ್ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ. ನ್ಯಾಯಾಲಯಕ್ಕೆ ದೊಡ್ಡ ಅಥವಾ ಸಣ್ಣ ಪ್ರಕರಣಗಳು ಅಂತೇನಿಲ್ಲ. ಪ್ರತಿಯೊಂದು ಪ್ರಕರಣವೂ ಮುಖ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಫೆ. 4ರಂದು ಭಾರತದ ಸುಪ್ರೀಂ ಕೋರ್ಟ್ ಸ್ಥಾಪನೆಯಾಗಿ 73 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ, "ಉನ್ನತ ನ್ಯಾಯಾಲಯವು ಸಾಂವಿಧಾನಿಕ ಕರ್ತವ್ಯಗಳು, ಕಟ್ಟುಪಾಡುಗಳು ಮತ್ತು ಕಾರ್ಯಗಳನ್ನು ನಿರ್ವಹಿಸುತ್ತದೆ. ಪ್ರತಿದಿನ ಕೋರ್ಟ್‌ನಲ್ಲಿ ನೂರಾರು ಪ್ರಕರಣಗಳು ವಿಚಾರಣೆಗೆ ಬರುತ್ತಿದ್ದು, ತ್ವರಿತ ವಿಲೇವಾರಿಗೆ ನ್ಯಾಯಾಧೀಶರು ಮತ್ತು ರಿಜಿಸ್ಟ್ರಾರ್ ಸಿಬ್ಬಂದಿ ಅಪಾರ ಶ್ರಮವಹಿಸುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ 12,471 ಪ್ರಕರಣಗಳನ್ನು ಕೋರ್ಟ್ ವಿಲೇವಾರಿ ಮಾಡಿದೆ. ಮಾರ್ಚ್ 23, 2020 ಮತ್ತು ಅಕ್ಟೋಬರ್ 30, 2022 ರ ನಡುವೆ ವಿಡಿಯೋ ಕಾನ್ಫರೆನ್ಸ್ ಮೂಲಕ 3.37 ಲಕ್ಷ ಪ್ರಕರಣಗಳನ್ನು ಆಲಿಸಲಾಗಿದೆ. ನಾಗರಿಕರ ಕುಂದುಕೊರತೆಗಳ ಬಗ್ಗೆ ವಿಚಾರಣೆ ನಡೆಸುವಾಗ ನ್ಯಾಯಾಲಯವು ಸರಳ ಸಾಂವಿಧಾನಿಕ ಬಾಧ್ಯತೆಯನ್ನು ನಿರ್ವಹಿಸುತ್ತದೆ" ಎಂದು ಹೇಳಿದ್ದರು.
ಇದನ್ನೂ ಓದಿ: ನ್ಯಾಯಾಲಯಕ್ಕೆ ಪ್ರತಿಯೊಂದು ಪ್ರಕರಣವೂ ಮುಖ್ಯ: ಸಿಜೆಐ ಡಿ.ವೈ.ಚಂದ್ರಚೂಡ್