ಬೆಂಗಳೂರು: ಕಳ್ಳತನ ಮಾಡಿದ್ದ ಮೊಬೈಲ್ ಯಾರು ಇಟ್ಟುಕೊಳ್ಳಬೇಕೆಂಬ ವಿಚಾರಕ್ಕಾಗಿ ಇಬ್ಬರು ಕಳ್ಳರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಮಾಡಿದ ಬಳಿಕ ಸಹಜ ಸಾವು ಎಂದು ಬಿಂಬಿಸಲು ಹಂತಕ ಹಾಗೂ ಆತನ ಸಹಚರರು ರೈಲ್ವೇ ಹಳಿಗೆ ಶವ ಬಿಸಾಕಿ ಪರಾರಿಯಾಗಿದ್ದು, ನಾಲ್ವರು ಆರೋಪಿಗಳನ್ನು ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
17 ವರ್ಷದ ರವಿತೇಜ್ ಕೊಲೆಯಾದ ಬಾಲಕ. ರಾಕೇಶ್ ಆಲಿಯಾಸ್ ಡ್ಯಾನಿ ಬಂಧಿತ ಆರೋಪಿಯಾದರೆ ಮತ್ತೆ ಮೂವರು ಬಾಲಾಪರಾಧಿಗಳಾಗಿದ್ದಾರೆ. ಚಂದಾಪುರದ ಬನಹಳ್ಳಿಯ ರವಿತೇಜ್ ತಂದೆ ಮಂಜುನಾಥ್ ವೃತ್ತಿಯಲ್ಲಿ ಬಡಗಿಯಾಗಿದ್ದು, ಇವರ ಇಬ್ಬರು ಮಕ್ಕಳಲ್ಲಿ ರವಿತೇಜ್ ಒಬ್ಬನಾಗಿದ್ದ. 9ನೇ ತರಗತಿವರೆಗೂ ವ್ಯಾಸಂಗ ಮಾಡಿದ ಈತ ಮೂರು ವರ್ಷದ ಹಿಂದೆ ಶಾಲೆ ತೊರೆದಿದ್ದ. ಕೆಲ ದಿನಗಳ ಹಿಂದೆ ಸ್ನೇಹಿತ ರಾಕೇಶ್ ಜೊತೆ ಸೇರಿಕೊಂಡು ಚಂದಾಪುರದಲ್ಲಿ ಮೊಬೈಲ್ ಕದ್ದಿದ್ದ. ಇಬ್ಬರ ನಡುವೆ ಯಾರು ಮೊಬೈಲ್ ಇಟ್ಟುಕೊಳ್ಳಬೇಕು ಹಾಗೂ ಎಷ್ಟು ದರಕ್ಕೆ ಮಾರಾಟ ಮಾಡಬೇಕೆಂಬ ವಿಚಾರಕ್ಕಾಗಿ ಗಲಾಟೆಯಾಗಿ ಹೊಡೆದಾಡಿಕೊಂಡಿದ್ದಾರೆ.
ಕಳೆದ ಜ.30ರಂದು ರವಿತೇಜ್ ಇಲ್ಲದಿರುವಾಗ ಮನೆಗೆ ಬಂದು ನಿಮ್ಮ ಮಗ ಮೊಬೈಲ್ ವಿಚಾರಕ್ಕಾಗಿ ನನ್ನೊಂದಿಗೆ ಜಗಳವಾಡಿ ಹೊಡೆದಿದ್ದಾನೆ. ಆತನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮಂಜುನಾಥ್ಗೆ ಆರೋಪಿ ರಾಕೇಶ್ ಧಮ್ಕಿ ಹಾಕಿದ್ದಾನೆ. ಈ ವೇಳೆ ರಾಕೇಶ್ನನ್ನು ಸಮಾಧಾನಪಡಿಸಿದ ಮಂಜುನಾಥ್, ಇಬ್ಬರು ಸ್ನೇಹಿತರಾಗಿದ್ದೀರಿ, ಜಗಳವಾಡಬೇಡಿ. ನನ್ನ ಮಗನಿಗೆ ಬುದ್ಧಿ ಹೇಳುತ್ತೇನೆ ಎಂದು ಸಂತೈಸಿ ಕಳುಹಿಸಿದ್ದರು.
ಪತ್ತೆಯಾದ ಮೊಬೈಲ್ನಿಂದ ಅರೋಪಿ ಜಾಡು ಹಿಡಿದ ಪೊಲೀಸರು...
ಜ.30ರಂದು ಅದೇ ದಿನ ಸಂಜೆ ರವಿತೇಜ್ಗೆ ಕರೆ ಮಾಡಿದ ಆರೋಪಿಯು ಮೊಬೈಲ್ ವಿಚಾರಕ್ಕಾಗಿ ಮಾತನಾಡಬೇಕೆಂದು ಮರಸೂರು ರೈಲ್ವೇ ಬಿಡ್ಜ್ ಬಳಿ ಕರೆಸಿಕೊಂಡಿದ್ದ. ಪೂರ್ವ ಸಂಚಿನಂತೆ ಸ್ನೇಹಿತರನ್ನು ಒಗ್ಗೂಡಿಸಿಕೊಂಡು ರವಿತೇಜ್ ಮೇಲೆ ಎಗರಾಡಿ ಚಾಕುವಿನಿಂದ ಮನಬಂದಂತೆ ತಿವಿದು ಕೊಲೆ ಮಾಡಿದ್ದಾರೆ. ಹತ್ಯೆ ಬಳಿಕ ಶವವನ್ನು ರೈಲ್ವೇ ಹಳಿಗೆ ಬಿಸಾಡಿ ಕಾಲ್ಕಿತ್ತಿದ್ದಾರೆ. ತದನಂತರ ಮಾರನೇ ದಿನ ಅಂದರೆ ಜ.31ರಂದು ಬೆಳಗ್ಗೆ ತಂಜಾವೂರು ಎಕ್ಸ್ ಪ್ರೆಸ್ ರೈಲು ಶವದ ಮೇಲೆ ಹರಿದಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಲೊಕೋ ಪೈಲಟ್ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.