ಬೆಂಗಳೂರು: ಪ್ರಕರಣ ವಾಪಸ್ ತೆಗೆದುಕೊಂಡಿಲ್ಲ ಎಂದು ಸಿನಿಮೀಯ ಶೈಲಿಯಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿ ಅಪಘಾತ ಎಂಬಂತೆ ಬಿಂಬಿಸಿದ್ದ ಇಬ್ಬರು ಆರೋಪಿಗಳನ್ನು ಪುಲಕೇಶಿನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಎಸ್.ಕೆ.ಗಾರ್ಡನ್ ನಿವಾಸಿ ಸಯ್ಯದ್ ಆಸ್ಗರ್ ಹತ್ಯೆಯಾದವರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಆಸ್ಗರ್ ಸ್ನೇಹಿತ ಮುಜಾಯಿದ್ ಎಂಬವರು ಹಲ್ಲೆಗೊಳಗಾಗಿದ್ದು, ಈತ ನೀಡಿದ ದೂರಿನ ಮೇರೆಗೆ ನವಾಜ್ ಹಾಗೂ ಅಮಿನ್ ಎಂಬವರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುತ್ತಿದ್ದ ಆಸ್ಗರ್ ಬಳಿ ಕಳೆದ ಎಂಟು ತಿಂಗಳ ಹಿಂದೆ ಎರಡು ಕಾರುಗಳನ್ನು ಪರಿಚಯಸ್ಥ ಅಮಿನ್ಗೆ 4 ಲಕ್ಷ ರೂ.ಗೆ ಮಾರಾಟ ಮಾಡಿದ್ದ. ಆದರೆ ಹಣವನ್ನು ಅಮಿನ್ ನೀಡಿರಲಿಲ್ಲ. ಹಲವು ತಿಂಗಳಿಂದ ಸಬೂಬು ನೀಡುತ್ತಾ ಬಂದಿದ್ದ ಅಮಿನ್ನನ್ನು 20 ದಿನಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ಆಸ್ಗರ್, ಹಣ ನೀಡುವಂತೆ ಹೇಳಿದಾಗ ಅಮಿನ್ ಒಪ್ಪಿಕೊಂಡಿದ್ದ.
ಇದಾದ ಕೆಲವೇ ದಿನಗಳ ಅಂತರದಲ್ಲೇ ಎಸ್.ಕೆ.ಗಾರ್ಡನ್ ಬಳಿ ಮುಜಾಯಿದ್ ನನ್ನ ಗುರಿಯಾಗಿಸಿ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದರು. ಜೆ.ಸಿನಗರ ಪೊಲೀಸ್ ಠಾಣೆಯಲ್ಲಿ ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ಮುಜಾಯಿದ್ ದೂರು ನೀಡಿದ್ದ. ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಈ ಮಧ್ಯೆ ಅಸ್ಗರ್ಗೆ ಪ್ರಕರಣ ಹಿಂಪಡೆಯಲು ಒತ್ತಾಯಿಸಿದ್ದರು. ಮಾತುಕತೆಗಾಗಿ ಆಸ್ಗರ್ ಹಾಗೂ ಮಜಾಯಿದ್‌ನನ್ನು ಕರೆಯಿಸಿಕೊಂಡಿದ್ದರು. ಶತಾಯಗತಾಯ ಕೇಸ್ ಹಿಂಪಡೆದುಕೊಳ್ಳುವುದಿಲ್ಲ ಎಂದು ಆರೋಪಿಗಳಿಗೆ ಖಡಕ್ ಆಗಿ ತಿಳಿಸಿದ್ದರು.
ಇದರಿಂದ ಆಕ್ರೋಶಗೊಂಡ ಅಮಿನ್ ಸ್ಕಾರ್ಪಿಯೊ ಕಾರಿನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಆಸ್ಗರ್ ಹಾಗೂ ಮುಜಾಯಿದ್ ಮೇಲೆ ಉದ್ದೇಶಪೂರ್ವಕವಾಗಿ ಕಾರು ಹತ್ತಿಸಿದ್ದ. ಘಟನೆಯಲ್ಲಿ ಮುಜಾಯಿದ್ ಹಾಗೂ ಆಸ್ಗರ್ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಆಸ್ಗರ್ ಮೃತಪಟ್ಟಿದ್ದಾರೆ. ಘಟನೆಗೆ ಕಾರಣರಾದ ಅಮಿನ್, ಕೃತ್ಯವೆಸಗಲು ಸಹಕರಿಸಿದ್ದ ನವಾಜ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: 3 ವರ್ಷಗಳ ಹಿಂದೆ ಮಹಿಳೆ ಕೊಲೆ: ಪತಿ, ಅಪಹರಣದ ಕಥೆ ಹೆಣೆದ ಸಹೋದರ ಸೆರೆ