ಬೆಂಗಳೂರು: ಪುಲಿಕೇಶಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸೈಯ್ಯದ್ ಅಸ್ಗರ್ ಎಂಬಾತನ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದೆ. ತಮ್ಮ ವಿರುದ್ಧ ದಾಖಲಿಸಿದ್ದ ಪ್ರಕರಣ ಹಿಂಪಡೆಯಲಿಲ್ಲ ಎಂಬ ಕಾರಣಕ್ಕೆ ಆರೋಪಿಗಳಾದ ನವಾಜ್, ಅಮಿನ್ ಸೇರಿ ಅಮಾನವೀಯವಾಗಿ ಸೈಯ್ಯದ್ ಅಸ್ಗರ್'ನ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿರುವುದು ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ. ಅಕ್ಟೋಬರ್ 18ರ ರಾತ್ರಿ ಪುಲಿಕೇಶಿ ನಗರ ಠಾಣಾ ವ್ಯಾಪ್ತಿಯ ಎಸ್.ಕೆ.ಗಾರ್ಡನ್‌ನಲ್ಲಿ ಅಸ್ಗರ್'ನನ್ನ ಆ್ಯಕ್ಸಿಡೆಂಟ್ ಮಾಡಿ, ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಲಾಗಿತ್ತು.
ಹತ್ಯೆ ಯತ್ನ ಪ್ರಕರಣ ಹಿಂಪಡೆದಿಲ್ಲ ಎಂಬ ಕಾರಣಕ್ಕೆ ಕೊಲೆ: ಹತ್ಯೆಯಾದ ಸೈಯ್ಯದ್ ಅಸ್ಗರ್ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದ. ಎಂಟು ತಿಂಗಳ ಹಿಂದೆ 4 ಲಕ್ಷ ಮೌಲ್ಯದ ಎರಡು ಕಾರುಗಳನ್ನ ತನ್ನ ಪರಿಚಯಸ್ಥರಾಗಿದ್ದ ಅಮಿನ್'ಗೆ ಮಾರಾಟ ಮಾಡಿದ್ದ. ಆದರೆ, ಹಲವು ತಿಂಗಳುಗಳಿಂದಲೂ ಹಣ ನೀಡದೇ ಸಬೂಬು ಹೇಳಿಕೊಂಡು ಬರುತ್ತಿದ್ದ. ಕೃತ್ಯಕ್ಕೂ 20 ದಿನಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ಕುಳಿತು ಮಾತನಾಡಿದಾಗ ಸೈಯ್ಯದ್ ಅಸ್ಗರ್'ಗೆ ಹಣ ನೀಡವುದಾಗಿ ಅಮಿನ್ ಒಪ್ಪಿಕೊಂಡಿದ್ದ.
ಇದಾದ ಕೆಲವೇ ದಿನಗಳ ಅಂತರದಲ್ಲಿ ಆರೋಪಿ ಅಮಿನ್ ಮತ್ತವನ ಕಡೆಯವರು ಸೈಯ್ಯದ್ ಅಸ್ಗರ್ ಹಾಗೂ ಆತನ ಸ್ನೇಹಿತ ಮುಜಾಹಿದ್'ನನ್ನ ಗುರಿಯಾಗಿಸಿಕೊಂಡು ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದರು. ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ಆರೋಪಿಗಳ ವಿರುದ್ಧ ಮುಜಾಹಿದ್ ಜೆ.ಸಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ನಡುವೆ ಪ್ರಕರಣ ಹಿಂಪಡೆಯುವಂತೆ ಅಮಿನ್ ಮತ್ತು ಆತನ ಕಡೆಯವರು ಒತ್ತಾಯಿಸಿದ್ದರು. ಒಪ್ಪದಿದ್ದಾಗ ಅಕ್ಟೋಬರ್ 18ರಂದು ರಾತ್ರಿ ಅಸ್ಗರ್ ಹಾಗೂ ಮಜಾಹಿದ್'ನನ್ನ ಮಾತುಕತೆಗಾಗಿ ಎಸ್.ಕೆ.ಗಾರ್ಡನ್ ಬಳಿ ಕರೆಸಿಕೊಂಡಿದ್ದರು.
ಆಗಲೂ ಸಹ ಶತಾಯಗತಾಯ ಪ್ರಕರಣ ಹಿಂಪಡೆದುಕೊಳ್ಳುವುದಿಲ್ಲ ಎಂದು ಅಸ್ಗರ್ ಹಾಗೂ ಮುಜಾಹಿದ್ ಆರೋಪಿಗಳಿಗೆ ತಿಳಿಸಿ ತಮ್ಮ ದ್ವಿಚಕ್ರ ವಾಹನದಲ್ಲಿ ವಾಪಸ್ ತೆರಳಲು ಮುಂದಾಗಿದ್ದರು. ಈ ವೇಳೆ, ಆಕ್ರೋಶಗೊಂಡ ಅಮಿನ್, ತನ್ನ ಸ್ಕಾರ್ಪಿಯೊ ಕಾರನ್ನ ಉದ್ದೇಶಪೂರ್ವಕವಾಗಿ ಅಸ್ಗರ್ ಮೇಲೆ ಹರಿಸಿ ಮುಜಾಹಿದ್'ನ ಮೇಲೆ ಹಲ್ಲೆ ಮಾಡಿದ್ದ. ಘಟನೆಯಲ್ಲಿ ಅಸ್ಗರ್ ಸಾವನ್ನಪ್ಪಿದ್ದರೆ, ತೀವ್ರವಾಗಿ ಗಾಯಗೊಂಡಿದ್ದ ಮುಜಾಹಿದ್'ನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮುಜಾಹಿದ್ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪುಲಿಕೇಶಿನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಾಗ, ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿ ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದ ಆರೋಪಿಗಳ ಸಂಚು ಬಯಲಾಗಿದೆ. ಸದ್ಯ ಘಟನೆ ಕಾರಣರಾದ ಆರೋಪಿಗಳ ಪೈಕಿ ಅಮಿನ್ ಹಾಗೂ, ಕೃತ್ಯವೆಸಗಲು ಸಹಕರಿಸಿದ್ದ ನವಾಜ್ ನನ್ನ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಉಜಿರೆ: ಮಗನಿಗೆ ಚೂರಿ ಇರಿದು ಕೊಂದ ತಂದೆ