ಬೆಂಗಳೂರು: ನನ್ನ ಬುಡಕ್ಕೆ ಏಕೆ ಬರುತ್ತೀರಿ?. ನಿಂಬೆಹಣ್ಣನ್ನು ಸರಿಯಾಗಿ ಮಂತ್ರಿಸಿ ಇನ್ನೊಂದು 40 ಸೀಟು ಬಂದಿದ್ದರೆ ಬುಗರಿಯಾಡಿಸುತ್ತಿದ್ರಿ ಎಂದು ಮಾಜಿ ಸಚಿವ ಆರ್. ಅಶೋಕ್ ಅವರು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನು ಛೇಡಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ 2023ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕದ ಪರ್ಯಾಲೋಚನೆ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ರೇವಣ್ಣ ಅವರು, ನೀವು ನಮ್ಮ ಮಾತು ಕೇಳಲಿಲ್ಲ. ನೀವಿಬ್ಬರು ಸೇರಿ ನಮ್ಮನ್ನು ತೆಗೆಯಲು ನೋಡಿದ್ದೀರಿ. ಅದರಿಂದ ನೀವು ಹೋದ್ರಿ, ನಾವು ಹೋದೇವು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆರ್. ಅಶೋಕ್ ನೀವು ಜೋತಿಷಿ ಬದಲಾಯಿಸಿ ಅರ್ಧ ದಾರಿಯಲ್ಲೇ ಕೈಬಿಟ್ಟರಂತೆ. ಅವರನ್ನೇ ಇಟ್ಟುಕೊಂಡಿದ್ದರೆ ರಾಹುಕಾಲ, ಗುಳಿಕಾಲ ಎಲ್ಲವನ್ನು ಸರಿಯಾಗಿ ಹೇಳುತ್ತಿದ್ದರು. ಈಗಿರುವ ಜೋತಿಷಿ ನಿಮಗೆ ಸರಿಯಾಗಿ ಹೇಳುತ್ತಿಲ್ಲ ಎಂದು ಕಾಲೆಳೆದರು.
ರೇವಣ್ಣ ಮಾತನಾಡಿ, ಕ್ಷೇತ್ರದ ಜನರ ಸೇವೆ ಮಾಡುತ್ತೇನೆಯೇ ಹೊರತು ಯಾರ ವಿರೋಧವನ್ನು ಕಟ್ಟಿಕೊಳ್ಳುವುದಿಲ್ಲ. ಜಲ್ಲಿ ಕ್ರಷರ್ನಲ್ಲಿ ತೆರಿಗೆ ಸೋರಿಕೆ ಬಿಗಿಗೊಳಿಸಿದರೆ ಕೋಟ್ಯಂತರ ರೂ. ಆದಾಯ ಬರಲಿದೆ. ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವರಾಗಿದ್ದ ಅಶೋಕ್ ಅವರು ಕೆಲಸ ಮಾಡಿಕೊಟ್ಟಿದ್ದಾರೆ ಎಂದರು.
ಆಗ ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ರೇವಣ್ಣ ಅವರಿಗೆ ಅಶೋಕ್ ಮೇಲೆ ತುಂಬ ಪ್ರೀತಿ ಎಂದರು. ಆಗ ರೇವಣ್ಣ ಅವರು, ಹೆಚ್.ಡಿ ಕುಮಾರಸ್ವಾಮಿ ಹಾಗೂ ಜಿ.ಪರಮೇಶ್ವರ್ ಅವರು ಚೆನ್ನಾಗಿದ್ದಾರೆ ಎಂದರು. ಆಗ ಬಿಜೆಪಿ ಶಾಸಕ ಸುನೀಲ್ ಕುಮಾರ್ ಮಾತನಾಡಿ, ಇನ್ಯಾರು ಬಾಕಿ ಉಳಿದಿದ್ದಾರೆ ಎಂದಾಗ ಅಶೋಕ್ ಅವರು ಹೆಚ್.ಕೆ.ಪಾಟೀಲ್ ಒಬ್ಬರೇ ಉಳಿದಿದ್ದಾರೆ ಎಂದರು. ಆಗ ಹೆಚ್.ಕೆ.ಪಾಟೀಲ್ ಅವರೇ ನನ್ನನ್ನು ಬಿಟ್ಟಿದ್ದಾರೆ. ನೀವೇಕೆ ಪ್ರಸ್ತಾಪಿಸುತ್ತೀರಿ. ನಾವು ದೂರದಲ್ಲಿದ್ದೇವೆ ಎಂದರು. ಒಂದು ಹಂತದಲ್ಲಿ ಮಧ್ಯಪ್ರವೇಶಿಸಿದ ಎಸ್.ಟಿ.ಸೋಮಶೇಖರ್, ರೇವಣ್ಣನವರು ಯಾರು ಬೇಕಾದರೂ ಹೇಳಬಹುದು. ನಾವು ಹೇಳಲು ಹೋದರೆ ಹುಷಾರ್ ಎನ್ನುತ್ತಾರೆ ಎಂದರು.
ಈ ವೇಳೆ ಮಾತನಾಡಿದ ರೇವಣ್ಣ, ಸೋಮಶೇಖರ್ ಅವರಿಗೆ ಹುಷಾರ್ ಎಂದು ಹೇಳುತ್ತಿಲ್ಲ. ಕಾಲಚಕ್ರ ತಿರುಗುತ್ತಿದೆ. ಅಶೋಕ್ ಹಾಗೂ ಬೊಮ್ಮಾಯಿ ಅವರು ಒಂದು ಕುಟುಂಬವಿದ್ದಂತೆ. ಅವರ ಬಗ್ಗೆ ಗೌರವವಿದೆ. ಎಂ.ಬಿ ಪಾಟೀಲ್ ಅವರ ತಂದೆಯವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕಾಲದವರು. ಅಶೋಕಣ್ಣವರ ಜೊತೆ ಚೆನ್ನಾಗಿದ್ದಾರೆ. ಹೆಚ್.ಕೆ ಪಾಟೀಲ್ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎರಡು ಹೋಬಳಿಗೆ ನೀರು ಕೊಟ್ಟಿದ್ದಾರೆ ಎಂದು ಹೇಳಿದರು.
ಆಗ ಬಿಜೆಪಿಯ ಅರವಿಂದ್ ಬೆಲ್ಲದ್ ಮಾತನಾಡಿ, ನಿಮ್ಮ ನೇತೃತ್ವದಲ್ಲಿ ರಾಷ್ಟ್ರೀಯ ಸರ್ಕಾರ ಮಾಡೋಣ ಎಂದು ಛೇಡಿಸಿದರು. ಮಾತು ಮುಂದುವರೆಸಿದ ರೇವಣ್ಣ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು 4 ಸಾವಿರ ಬಸ್ ಖರೀದಿಸುತ್ತಿದ್ದಾರೆ. ನಮ್ಮ ಕ್ಷೇತ್ರಕ್ಕೆ 20 ಬಸ್ ಕೊಡಿ ಎಂದು ಕೇಳುತ್ತಿದ್ದೇನೆ. ಇಂಧನ ಇಲಾಖೆ ವಿಚಾರವನ್ನು ಒಂದು ದಿನದ ಮಟ್ಟಿಗೆ ಹೇಳಬಲ್ಲೆ. ಚರ್ಚೆ ಅವಕಾಶ ಕೊಡಿ ಎಂದು ಕೋರಿದರು.
ನೀರು ಪೂರೈಕೆಗೆ ಕ್ರಮ: ಕುಡಿಯುವ ನೀರಿಗೆ ತೊಂದರೆಯಾಗಿದ್ದರೆ ಅಧಿಕಾರಿಗಳಿಗೆ ಸೂಚನೆ ನೀಡಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ವಿಧಾನಸಭೆಯಲ್ಲಿ ತಿಳಿಸಿದರು. ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಜಗದೀಶ್ ಶಿವಯ್ಯ ಗುಡಗುಂಟಿ ಅವರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಜಮಖಂಡಿ ಕ್ಷೇತ್ರದಲ್ಲಿ ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ನೀರು ಬಿಡಲು ಕ್ರಮ ಕೈಗೊಳ್ಳಲಾಗುವುದು. ಕಬ್ಬು ಬೆಳೆಗೆ ನೀರಿನ ಅಗತ್ಯವಿದ್ದರೆ ಆ ಬಗ್ಗೆ ಪರಿಶೀಲನೆ ಮಾಡುವುದಾಗಿ ಹೇಳಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಜಗದೀಶ್ ಅವರು, ಎರಡ್ಮೂರು ತಿಂಗಳಿನಿಂದ ಮಳೆಯಿಲ್ಲದೆ ಕೃಷ್ಣ ನದಿ ಬತ್ತಿತ್ತು. ಈಗ ನೀರು ಬಂದಿದೆ. ಶಿರಹಟ್ಟಿ ಭಾಗದಲ್ಲಿ ನೀರನ್ನು ತಡೆದಿದ್ದಾರೆ. ಸಾವಳಗಿಯ - ಸುಂಗಳ ಏತ ನೀರಾವರಿಗಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ತುಗಚಿ-ಸಬಲೇಶ್ವರ್ ಜಾಕ್ವೆಲ್ನಿಂದ ಕೆರೆ ತುಂಬಿಸಲು ನೀರು ಬಿಡಬೇಕು ಎಂದು ಮನವಿ ಮಾಡಿದರು.
ಹಣಕಾಸು ಇಲಾಖೆಯಿಂದ ಅನುಮತಿ ಪಡೆದು ಕೆಲಸ: ನೆಲಮಂಗಲ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಪಡಿಸಲು ಮತ್ತೊಮ್ಮೆ ಪ್ರಸ್ತಾವನೆ ಸಿದ್ದಪಡಿಸಿ ಹಣಕಾಸು ಇಲಾಖೆಯಿಂದ ಅನುಮತಿ ಪಡೆದು ಕೆಲಸ ಆರಂಭಿಸುವುದಾಗಿ ನಗರ ಅಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಪ್ರಶ್ನೋತ್ತರ ವೇಳೆ ಶಾಸಕ ಶ್ರೀನಿವಾಸಯ್ಯ ಅವರ ಪ್ರಶ್ನೆಗೆ ಉತ್ತರಿಸಿದರು.
ನೆಲಮಂಗಲ ನಗರಸಭೆ ವ್ಯಾಪ್ತಿಗೆ ಇತ್ತೀಚೆಗೆ ವಿಲೀನಗೊಂಡ ಗ್ರಾಮ ಪಂಚಾಯಿತಿ ಪ್ರದೇಶಗಳು ಸೇರಿದಂತೆ 236 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ರೂಪಿಸಲು ಆರ್ಥಿಕ ಇಲಾಖೆಗೆ ಯೋಜನಾ ವರದಿಯನ್ನು ಸಲ್ಲಿಸಲಾಯಿತು. ಆದರೆ, ಅನುದಾನದ ಕೊರತೆಯಿಂದ ಪ್ರಸ್ತಾವನೆ ತಿರಸ್ಕಾರವಾಗಿದೆ ಎಂದರು. ಇತ್ತೀಚೆಗಷ್ಟೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಚರ್ಚೆ ನಡೆಸಿದ್ದು, ಮೂಲಸೌಲಭ್ಯ ಅಭಿವೃದ್ಧಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನೆಲಮಂಗಲ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇದನ್ನೂ ಓದಿ: ಕರ್ನಾಟಕ ಸರಕು ಸೇವೆಗಳ ತೆರಿಗೆ ಮಸೂದೆಗೆ ಅಂಗೀಕಾರ ನೀಡಿದ ವಿಧಾನಸಭೆ