ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಆಗಮಿಸುವ ಮತದಾರರರಿಗೆ ಕನಿಷ್ಠ ಮೂಲಸೌಲಭ್ಯಗಳ ಕುರಿತು ಫೆಬ್ರವರಿ 28ರ ಒಳಗಾಗಿ ವರದಿ ನೀಡುವಂತೆ ಅಧಿಕಾರಿಗಳಿಗೆ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.
"ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಮಾಡಲು ಮತಗಟ್ಟೆಗಳಿಗೆ ಬರುವ ಮತದಾರರಿಗೆ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಮತದಾನಕ್ಕಾಗಿ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿರುತ್ತದೆ" ಎಂದು ತಿಳಿಸಿದ್ದಾರೆ.
"ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗೆ ಅನುಗುಣವಾಗಿ ಕೆಲವು ಮತಗಟ್ಟೆಯಲ್ಲಿ ಕನಿಷ್ಠ ಮೂಲ ಸೌಲಭ್ಯಗಳಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಮತಗಟ್ಟೆ ಸ್ಥಾಪಿಸುವ ಕಟ್ಟಡಗಳನ್ನು ಪರಿಶೀಲನೆ ನಡೆಸಬೇಕು. ಈ ವೇಳೆ ವಿಕಲಚೇತನ ಮತದಾರರಿಗೆ ಮತಗಟ್ಟೆ ಪ್ರವೇಶಿಸುವುದಕ್ಕೆ ಸೂಕ್ತ ಸೌಲಭ್ಯಗಳು ಇವೆಯೇ? ಮತಗಟ್ಟೆ ಸ್ಥಾಪಿಸುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯಗಳ ಕೊಠಡಿ ಹಾಗೂ ಆವರಣದಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು" ಎಂದು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಕೆಲ ರಾಜಕಾರಣಿಗಳಿಗೆ ಬ್ರಾಹ್ಮಣ ಸಮುದಾಯದ ಕುರಿತು ದೃಷ್ಟಿದೋಷವಿದೆ, ತಪಾಸಣೆ ಅಗತ್ಯ: ಎಸ್ ಸುರೇಶ್ ಕುಮಾರ್
ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನ: ವಿಧಾನಸಭಾ ಚುನಾವಣೆ ಹಿನ್ನೆಲೆ ಎಲ್ಲ ಪಕ್ಷಗಳು ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿವೆ. ಕೆಲವೊಂದು ಕಾರ್ಯಕ್ರಮಗಳನ್ನು ಆಯೋಜಿಸಿ ಜನರ ಮನಸ್ಸನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ಜೊತೆಗೆ ಕೆಲವೊಬ್ಬರು ತಾವಿದ್ದ ಪಕ್ಷದಿಂದ ಹೊರಬಂದು ಬೇರೊಂದು ಪಕ್ಷವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕಾರಣಿಗಳು ಶತಪ್ರಯತ್ನ ಮಾಡುತ್ತಿದ್ದಾರೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಪರಸ್ಪರ ಮಾತಿನ ಪ್ರಹರದ ಮೂಲಕ ಗುದ್ದಾಡಿಕೊಳ್ಳುತ್ತಿವೆ.
ಅಲ್ಲದೇ ಎಲ್ಲ ಪಕ್ಷಗಳ ಕೇಂದ್ರ ನಾಯಕರು, ಹಿರಿಯ ಮುಖಂಡರು ರಾಜ್ಯಕ್ಕೆ ಆಗಮಿಸಿ ಜನರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಜನಪರ ಕಾರ್ಯಕ್ರಮಗಳು, ಜೊತೆಗೆ ವಿಶೇಷ ರ್ಯಾಲಿಗಳನ್ನು ಆಯೋಜಿಸಿ ತಮ್ಮ ಆಡಳಿತದ ಕಾರ್ಯಗಳನ್ನು ಜನತೆಗೆ ತಿಳಿಸುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಮತ ಹಾಕಿ ಎಂದು ಜನತೆಯಲ್ಲಿ ವಿನಂತಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಈ ವರ್ಷದಲ್ಲಿ ವಿಶೇಷ ಯಾತ್ರೆಗಳನ್ನು ಕೈಗೊಂಡಿದ್ದಾರೆ.
ಇನ್ನೂ ಚುನಾವಣಾ ಆಯೋಗವು ಮತದಾನಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡುವಂತೆ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರಂತೆ ಅವರು ಸಭೆಗಳನ್ನು ಆಯೋಜಿಸಿ ಮತದಾರರಿಗೆ ಕನಿಷ್ಟ ಮೂಲಸೌಕರ್ಯಗಳ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದಾರೆ. ಅಲ್ಲದೇ ಚುನಾವಣೆ ನಡೆಯುವ ಕೊಠಡಿಗಳನ್ನು ಎಲ್ಲಾ ರೀತಿಯಲ್ಲಿ ಪರಿಶೀಲನೆ ನಡೆಸುವಂತೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ: ಸರ್ಕಾರಿ ನೌಕರರ ಮೇಲೆ ಜಲಫಿರಂಗಿ, ಅಶ್ರುವಾಯು ಪ್ರಯೋಗ