ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳು ಸೌರಮಂಡಲದ ಕೌತುಕವನ್ನು ಕಣ್ತುಂಬಿಕೊಳ್ಳಬೇಕು ಎಂದರೆ ಬೆಂಗಳೂರಿಗೆ ಇಲ್ಲವೆ ಮಂಗಳೂರಿಗೆ ಹೋಗಬೇಕು. ಇತ್ತ ಬಳ್ಳಾರಿಯ ತಾರಾಲಯಕ್ಕೆ ತಾತ್ಕಾಲಿಕವಾಗಿ ಬೀಗ ಬಿದ್ದಿದೆ. ಹಾಗಾಗಿ ರಾಜ್ಯದ ಅನೇಕ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಸೌರ ಅಧ್ಯಯನ ಗಗನ ಕುಸುಮವಾಗಿತ್ತು. ಆದರೆ, ಈಗ ಮಕ್ಕಳ ಕನಸಿನ ಸೌರಮಂಡಲವನ್ನು ಕಣ್ಮುಂದೆ ತರಲು ಸಂಚಾರಿ ತಾರಾಲಯ ಎಂಬ ಹೊಸ ಯೋಜನೆ ಪ್ರಾರಂಭವಾಗಿದೆ.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಉತ್ತೇಜಿಸಲು, ಸೌರಮಂಡಲದ ಕೌತುಕಗಳ ಕುರಿತು ಅರಿವು ಮೂಡಿಸುವ ಸಂಚಾರಿ ತಾರಾಲಯವೊಂದು ಶಾಲಾ ಅಂಗಳಕ್ಕೆ ಭೇಟಿ ನೀಡುತ್ತಿದೆ. ಡೈರಿ ಡೇ ಹಾಗೂ ಯುವ ಬೆಂಗಳೂರು ಟ್ರಸ್ಟ್ ಸಂಸ್ಥೆ ವತಿಯಿಂದ ಈ ಸಂಚಾರಿ ತಾರಾಲಯ ಅಭಿವೃದ್ಧಿಪಡಿಸಿದ್ದು, ಸರ್ಕಾರಿ ಶಾಲೆಗಳ ಮಕ್ಕಳನ್ನು ಕೇಂದ್ರಿಕರಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಸಂಚಾರಿ ತಾರಾಲಯಕ್ಕೆ ಚಾಲನೆ ನೀಡಿದ್ದಾರೆ.
ಇವುಗಳನ್ನು ನೋಡುತ್ತಿದ್ದರೆ ಬಾಲ್ಯದ ದಿನಗಳು ನೆನಪಾಗುತ್ತವೆ. ಪ್ರಯೋಗದಿಂದ ಸರ್ಕಾರಿ ಶಾಲಾ ಮಕ್ಕಳನ್ನು ವಿಜ್ಞಾನದತ್ತ ಸೆಳೆಯಲು ಇದು ತುಂಬಾ ಸಹಕಾರಿಯಾಗಿದೆ. ಈ ಕಾರ್ಯಕ್ಕೆ ರಾಜ್ಯ ಸರ್ಕಾರ ಎಲ್ಲಾ ಅನಕೂಲತೆ ಮಾಡಿಕೊಡಲಿದೆ ಎಂದು ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.
ಇನ್ನು, ಈ ಸಂಚಾರಿ ತಾರಾಲಯ ಗೊಮ್ಮಟದ ಆಕಾರದಲ್ಲಿದ್ದು, ಒಳಗೆ ಕತ್ತಲಿನಲ್ಲಿ ಒಂದೇ ಬಾರಿಗೆ 45 ವಿದ್ಯಾರ್ಥಿಗಳು ತಾರಾಲಯ ವೀಕ್ಷಿಸಲು ಸ್ಥಳಾವಕಾಶ ಕಲ್ಪಿಸಲಾಗಿದೆ. 14 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಮಿನಿ ತಾರಾಲಯ, 360 ಡಿಗ್ರಿ ಪ್ರೊಜೆಕ್ಟರ ಮೂಲಕ ಕಾರ್ಯ ನಿರ್ವಹಿಸಲಿದ್ದು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಷಯವನ್ನು ಪ್ರಸ್ತುತಪಡಿಸುತ್ತದೆ.
ವಿದ್ಯಾರ್ಥಿಗಳಿಗೆ ದೃಶ್ಯ ಪ್ರಾತ್ಯಕ್ಷಿಕೆಗಳ ಮೂಲಕ ವಿಜ್ಞಾನ ಬೋಧನೆ ಮಾಡಿದರೆ, ಸರಳವಾಗಿ ಮನದಟ್ಟು ಮಾಡಿಸಲು ಸಹಾಯವಾಗುತ್ತದೆ. ಅಲ್ಲದೇ 31 ವಿಷಯಗಳನ್ನು ಮೂರು ಭಾಗಗಳನ್ನಾಗಿ ಮಾಡಿ 3ಡಿ ತಂತ್ರಜ್ಞಾನದ ಮೂಲಕ ಪ್ರಾತ್ಯಕ್ಷಿಕೆ ಸಿದ್ಧಪಡಿಸಲಾಗಿದೆ ಎಂದು ಆಯೋಜಕ ಕಿರಣ್ ಹೇಳಿದರು.
ಶಾಲೆಗಳಿಗೆ ಸೌರವ್ಯೂಹ ಬಂದಿರುವುದು ತುಂಬಾ ಖುಷಿ ತಂದಿದೆ. ಸ್ನೇಹಿತರ ಜತೆ ನೋಡಿರುವುದು ಮರೆಯಲಾಗುವುದಿಲ್ಲ ಎನ್ನುತ್ತಾಳೆ ವಿದ್ಯಾರ್ಥಿನಿ ಭವ್ಯ.
ಸರ್ಕಾರಿ ಶಾಲೆಗಳಿಗೆ ಸಂಚಾರಿ ತಾರಾಲಯವನ್ನು ಉಚಿತವಾಗಿ ಶಾಲೆಗಳಿಗೆ ತರಿಸಿಕೊಳ್ಳುವ ಅವಕಾಶ ಕೂಡ ಹೊಂದಿದೆ. ಎಲ್ಲಾ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.