ಬೆಂಗಳೂರು: ಕೋವಿಡ್ ಲಾಕ್ಡೌನ್ನಿಂದಾಗಿ ತತ್ತರಿಸಿ ಹೋಗಿರುವ ಟೂರಿಸ್ಟ್ ಬಸ್ಗಳಿಗೆ 6 ತಿಂಗಳ ತೆರಿಗೆ ವಿನಾಯಿತಿ ಹಾಗೂ ಟ್ಯಾಕ್ಸಿ ಚಾಲಕರಿಗೆ ಘೋಷಿಸಿರುವ 5 ಸಾವಿರ ರೂಪಾಯಿಗಳ ಪರಿಹಾರವನ್ನು ಟೂರಿಸ್ಟ್ ಬಸ್ ಚಾಲಕರಿಗೂ ವಿಸ್ತರಿಸುವುದು ಸೇರಿದಂತೆ ಹಲವು ಬೇಡಿಕೆಗೆಳನ್ನು ರಾಜ್ಯ ಸರಕಾರದ ಮುಂದೆ ಇಟ್ಟಿರುವ ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ ಸಂಘದ ಪದಾಧಿಕಾರಿಗಳು, ಬೇಡಿಕೆ ಈಡೇರಿಸದಿದ್ದಲ್ಲಿ ಧರಣಿ ಸತ್ಯಾಗ್ರಹದ ಎಚ್ಚರಿಕೆಯನ್ನು ನೀಡಿದ್ದಾರೆ.
ನಗರದಲ್ಲಿಂದು ನಡೆದ ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಸಂಘದ ಅಧ್ಯಕ್ಷ ಕೆ ರಾಧಾಕೃಷ್ಣ ಹೊಳ್ಳ ಮಾತನಾಡಿ, ಇಂದು ಕೋವಿಡ್ನಿಂದ ಪ್ರಪಂಚದ ಎಲ್ಲ ಉದ್ಯಮದ ರೀತಿಯಲ್ಲಿ ನಮ್ಮ ಉದ್ಯಮ ಅತಿ ಹೆಚ್ಚು ಬಾಧಿತವಾಗಿದ್ದು, ಏಪ್ರಿಲ್ ನಿಂದ ಜುಲೈವರೆಗೆ ಪ್ರವಾಸಿಗರ ಋತುವಿನಲ್ಲಿ ಬಂದಿರುವುದರಿಂದ ಪ್ರವಾಸೋದ್ಯಮ ತತ್ತರಿಸಿ ಹೋಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ರೀತಿಯಲ್ಲಿ ಸಹಾಯಕ್ಕೆ ಬರದೇ ಇರುವುದು ಶೋಚನೀಯ ಮತ್ತು ಖಂಡನೀಯ. ಪ್ರಯಾಣಿಕರು ಇನ್ನು ಮುಂದೆ ಪ್ರಯಾಣಿಸುವುದು ಕಷ್ಟ ಸಾಧ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯ, ಲಾಕ್ ಡೌನ್ ಮುಕ್ತ ಆದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.
ನಂತರ ಮಾತನಾಡಿ, ಪ್ರವಾಸೋದ್ಯಮಕ್ಕೆ ಇನ್ನೂ ಎರಡು ವರ್ಷಗಳ ಕಾಲ ಯಾವುದೇ ಬೆಳವಣಿಗೆ ಕಾಣುವ ಅವಕಾಶಗಳಿಲ್ಲ, ಬಸ್ ಮಾಲೀಕರು, ಬ್ಯಾಂಕ್ ಹಣ ಮರುಪಾವತಿ, ಸಂಬಳ, ಬಾಡಿಗೆ ಈ ರೀತಿಯಲ್ಲಿ ಹಲವು ಆರ್ಥಿಕ ತೊಂದರೆಗಳು ಇರುವುದರಿಂದ ಸರ್ಕಾರ ಈ ಸಮಯದಲ್ಲಿ ಖಾಸಗಿ ಬಸ್ ಉದ್ಯಮದ ಕಷ್ಟಗಳಿಗೆ ಸ್ಪಂದಿಸಬೇಕು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜ್ ಶರ್ಮಾ ಮಾತನಾಡಿ, ಸರ್ಕಾರ ಹಿಂದಿನಿಂದಲೂ ಖಾಸಗಿ ಬಸ್ ಉದ್ಯಮದ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ತಮಗೆ ಬೇಕಾದ ರೀತಿಯಲ್ಲಿ ತೆರಿಗೆಯನ್ನು ಹೆಚ್ಚಿಸಿಕೊಂಡು ಬಂದಿದೆ. ಒಮ್ಮೆಯೂ ಸಹ ಈ ಉದ್ದಿಮೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ತೆರಿಗೆ ಕಟ್ಟಲು ಸಾಧ್ಯವೇ ಎಂದು ಯೋಚಿಸುವ ಸೌಜನ್ಯವನ್ನೂ ತೋರಿರುವುದಿಲ್ಲ. ಖಾಸಗಿ ಬಸ್ ಮಾಲೀಕತ್ವವನ್ನು ವಿರೋಧಿಸುತ್ತಲೇ ಬಂದಿರುವ ಸರ್ಕಾರ, ತನ್ನ ಸ್ವಾಮ್ಯದಲ್ಲಿರುವ ಸಾರಿಗೆ ಸಂಸ್ಥೆಗಳು ಯಾವುದೇ ತೆರಿಗೆ ಕಟ್ಟದೇ ಹೆಚ್ಚಿನ ಸವಲತ್ತುಗಳನ್ನು ಪಡೆದುಕೊಂಡರು ಸಹ ನಷ್ಟದಲ್ಲಿರುವುದು ಕಾಣಬಹುದಾಗಿದೆ ಎಂದು ಗಮನ ಸೆಳೆದರು.
ಸೋಮವಾರದಂದು ಸಾರಿಗೆ ಸಚಿವರಿಗೆ ಸಂಘದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಗುವುದು. ಈ ಬೇಡಿಕೆಗಳಿಗೆ ಮುಂದಿನ ಗುರುವಾರದ ಒಳಗಾಗಿ ಸಕರಾತ್ಮಕವಾಗಿ ಸ್ಪಂದನೆ ನೀಡದಿದ್ದಲ್ಲಿ ಸಾರಿಗೆ ಆಯುಕ್ತರ ಕಚೇರಿ ಮುಂದೆ ನಮ್ಮ ವಾಹನಗಳನ್ನು ತಂದು ನಿಲ್ಲಿಸಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಬೇಡಿಕೆಗಳು:
1. 6 ತಿಂಗಳ ಅವಧಿಯ ರಸ್ತೆ ತೆರಿಗೆ ವಿನಾಯಿತಿ.
2. ನಂತರದ 6 ತಿಂಗಳ ಅವಧಿಯಲ್ಲಿ ಶೇ 50 ರಷ್ಟು ತೆರಿಗೆ ವಿನಾಯಿತಿ.
3. ಮುಂಗಡ ತೆರಿಗೆ ಕಟ್ಟಲು ಈಗಿರುವ 15 ದಿನಗಳ ರಿಯಾಯಿತಿ ಅವಧಿಯನ್ನು 30 ದಿನಗಳಿಗೆ ವಿಸ್ತರಣೆ. (ಈ ವರ್ಷಕ್ಕೆ ಮಾತ್ರ ಸೀಮಿತ ಆಗುವಂತೆ.)
4. ಈಗಾಗಲೇ ಸರ್ಕಾರ ನೀಡಿರುವ ಚಾಲಕರ 5,000 ರೂ.ಗಳ ಪರಿಹಾರಕ್ಕೆ, ಬಸ್ ಚಾಲಕರನ್ನು ಸೇರಿಸಲು ವಿನಂತಿ.
5. ಅಂತರ್ ರಾಜ್ಯ ತೆರಿಗೆ ಮುಕ್ತ ಒಪ್ಪಂದಕ್ಕೆ ಸಹಿ,( ರೆಸಿಪ್ರೋಕಲ್ ಅಗ್ರೀಮ್ಮೆಂಟ್) ಇವೆಲ್ಲವೂ ರಾಜ್ಯ ಸರ್ಕಾರಕ್ಕೆ ಇಟ್ಟಿರುವ ಮನವಿ ಮತ್ತು ಬೇಡಿಕೆಗಳು.
ಕೇಂದ್ರ ಸರ್ಕಾರಕ್ಕೆ ಬೇಡಿಕೆ:
1. ಬ್ಯಾಂಕ್ಗಳಿಗೆ ಮಾಸಿಕ ಹಣ ಕಟ್ಟಲು 6 ತಿಂಗಳಿನ ಕಾಲಾವಕಾಶ.
2. ಯಾವುದೇ ಬಸ್ಗಳನ್ನು ಬ್ಯಾಂಕ್, ಖಾಸಗಿ ಹಣಕಾಸು ಸಂಸ್ಥೆಯವರು ಬಸ್ಗಳನ್ನು ಒಂದು ವರ್ಷದ ಅವಧಿಗೆ ಸೀಜ್ ಮಾಡದಂತೆ ಸರ್ಕಾರದಿಂದ ಆದೇಶ ಮತ್ತು ನಿರ್ದೇಶನ.
3. ಯಾವುದೇ ಅಡಮಾನ ಪಡೆಯದೇ ಸಾಲ ಸೌಲಭ್ಯ, ತಾತ್ಕಾಲಿಕ ಓವರ್‌ಡ್ರಾಫ್ಟ್ ಸೌಲಭ್ಯ.
4. ಒಂದು ವರ್ಷ ಅವಧಿಗೆ ಹವಾನಿಯಂತ್ರಿತ ವಾಹನಗಳಿಗೆ ಜಿಎಸ್ಟಿ ವಿನಾಯಿತಿ.
5. ಎರಡು ವರ್ಷಗಳ ಕಾಲ ಶೇ 15ರಷ್ಟು ಟೋಲ್ ವಿನಾಯಿತಿ.
6. ಕೋವಿಡ್ - 19 ಲಾಕ್ಡೌನ್ ದಿನಗಳ ವಿಮಾ ಯೋಜನೆ ಮುಂದಿನ ದಿನಗಳಿಗೆ ವಿಸ್ತರಣೆ.
7. ಒಂದು ದೇಶ, ಒಂದೇ ಪರಿವಾನಗಿ, ಒಂದೇ ತೆರಿಗೆ ಕಾನೂನು ಜಾರಿಗೆ ತರಲು ಬೇಡಿಕೆ ಮತ್ತು ಒತ್ತಾಯ .