ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಬಿಎಂಟಿಸಿ ಮತ್ತು ಕೆಎಸ್ಆರ್ಸಿ ನೌಕರರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆಯಿಂದ ನೌಕರರು ಕೆಲಸಕ್ಕೆ ಹಾಜರಾಗದ ಹಿನ್ನೆಲೆ ಪ್ರಯಾಣಿಕರು ಪರದಾಡುವಂತಾಗಿದೆ. ದೂರದೂರಿನಿಂದ ಬಂದವರು, ಹಾಗೂ ತಮ್ಮ ಊರಿಗೆ ಹೋಗಲು ಬಸ್ಗಳು ಇಲ್ಲದೆ ಪ್ರಯಾಣಿಕರು ಕಷ್ಟ ಅನುಭವಿಸುತ್ತಿದ್ದಾರೆ.
ಈ ನಡುವೆ ಸಾರಿಗೆ ನೌಕರರ ಪ್ರತಿಭಟನೆಯಿಂದ ತೊಂದರೆ ಅನುಭವಿಸುತ್ತಿರುವ ಪ್ರಯಾಣಿಕರ ಸಂಕಷ್ಟ ತಪ್ಪಿಸಲು ಬಿಎಂಟಿಸಿ, ಖಾಸಗಿ ಚಾಲಕ ಹಾಗೂ ನಿರ್ವಾಹಕರ ಮೊರೆ ಹೋಗಿದೆ . ಬಸ್ ಸಂಚಾರ ಆರಂಭವಾದ ಕಾರಣ ಆಕ್ರೋಶ ವ್ಯಕ್ತಪಡಿಸಿದ ಸಾರಿಗೆ ನೌಕರರು ಖಾಸಗಿ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಮೆಜಿಸ್ಟಿಕ್ ಬಳಿ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಬಸ್ ಸಂಚಾರ ಆರಂಭಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಖಾಸಗಿ ಚಾಲಕರನ್ನು ರಕ್ಷಿಸಿದ್ದಾರೆ. ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಸಾರಿಗೆ ನೌಕರರು ಆಗಮಿಸಿದ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.