ಬೆಂಗಳೂರು : ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಪಟ್ಟಂತೆ ನೌಕರರ ಸಂಘದಿಂದ ಇಂದು ಮಹತ್ವದ ಸಭೆ ನಡೆದಿದ್ದು, ಸರ್ಕಾರದ ವಿರುದ್ದ ರಣತಂತ್ರ ರೂಪಿಸಲು ಮುಂದಾಗಿದ್ದಾರೆ.
ರಾಜ್ಯ ರೈತ ಸಂಘದ ಕಚೇರಿಯಲ್ಲಿ ಸಾರಿಗೆ ನೌಕರರ ಹೋರಾಟ ಸಮಿತಿ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಇತರೆ ಟ್ರೇಡ್ ಯೂನಿಯನ್ಗಳ ಸಭೆ ನಡೆಯಿತು. ಸಭೆಯಲ್ಲಿ ಸರ್ಕಾರ ನೌಕರರ ಮನವಿಗೆ ಸ್ಪಂದಿಸದೆ ಪ್ರತಿಭಟನೆ ಹತ್ತಿಕ್ಕಲು ಬೇರೆ ದಾರಿ ಹುಡುಕುತ್ತಿದೆ. ಹಾಗಾಗಿ, 6ನೇ ವೇತನ ಆಯೋಗ ಜಾರಿ ಮಾಡಲೇಬೇಕೆಂದು ಒತ್ತಾಯಿಸಲು ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ನಿರ್ಧರಿಸಿದ್ದಾರೆ.
ಸಭೆ ಬಳಿಕ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರ ಪದೇ ಪದೇ ನೌಕರರೊಂದಿಗೆ ಮಾತುಕತೆ ಮಾಡುವುದಿಲ್ಲ, ಆರನೇ ವೇತನ ಆಯೋಗ ಜಾರಿ ಮಾಡುವುದಿಲ್ಲ ಎಂದು ಹೇಳಿಕೆ ಕೊಡ್ತಿದೆ. ಮುಖ್ಯಮಂತ್ರಿ, ಸಾರಿಗೆ ಸಚಿವರು ನೌಕರರೊಂದಿಗೆ ಮಾತುಕತೆಯಿಂದ ದೂರ ಉಳಿದಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಬೇಕು, ಸರಿಯಾದ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಮುಷ್ಕರ ಮುಂದುವರೆಯಲಿದೆ ಎಂದು ಹೇಳಿದರು.
ಇದನ್ನೂ ಓದಿ: ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ
12,400 ರೂ.ಬೇಸಿಕ್ ಸಂಬಳ ಸ್ಕೇಲ್ ಇದೆ. ಆದರೆ, ಸಾರಿಗೆ ನೌಕರರಿಗೆ ಈ ವಿಷಯದಲ್ಲಿ ಬೇಧಬಾವ ಮಾಡಲಾಗ್ತಿದೆ. ನಮ್ಮ ಅನಿರ್ದಿಷ್ಟಾವಧಿ ಮುಷ್ಕರ ಆರನೇ ದಿನವೂ ಮುಂದುವರೆಯುತ್ತಿದೆ. ನಾಳೆ ಸಾರಿಗೆ ನೌಕರರ ಕುಟುಂಬದವರು ಪ್ರತಿ ತಾಲೂಕು, ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ತಟ್ಟೆ ಲೋಟ ಹಿಡಿದು ಚಳವಳಿ ನಡೆಸಲಿದ್ದಾರೆ. ಯುಗಾದಿ ಹಬ್ಬದೊಳಗೆ ಸರ್ಕಾರ ಸಮಸ್ಯೆ ಇತ್ಯರ್ಥ ಮಾಡಬೇಕು. ನೌಕರರು ಸರ್ಕಾರದ ವಜಾ ನೋಟಿಸ್ಗೆ ಹೆದರಬೇಕಿಲ್ಲ ಎಂದರು.
ಕೋವಿಡ್ ಪಾಠ ನಮ್ಗೆ ಬೇಡ: ಸಚಿವರು ಕೋವಿಡ್ ಸಮಯದಲ್ಲಿ ಮುಷ್ಕರ ಬೇಡ ನಿಲ್ಲಿಸಿ ಎನ್ನುತ್ತಿದ್ದಾರೆ. ಬೆಳಗಾವಿಯಲ್ಲಿ ಸಭೆ ಮಾಡಲು ಹೋದರೆ ಕೋವಿಡ್ ಹೆಸರಲ್ಲಿ ನಮ್ಮನ್ನು ಬಂಧಿಸುತ್ತಾರೆ. ನಮ್ಮ ನಾಳಿನ ಚಳವಳಿಯಲ್ಲಿ ಕೋವಿಡ್ ನೀತಿ ನಿಯಮ ಪಾಲನೆ ಮಾಡುತ್ತೇವೆ. ಈ ಹಿಂದೆ ಪ್ರಧಾನಿಗಳು ಕೋವಿಡ್ ಇರುವಾಗಲೇ ತಮಟೆ ಜಾತ್ರೆ ಆಚರಣೆ ಮಾಡಿದ್ದರು. ರಾಜಕೀಯದವರಿಗೆ ಚುನಾವಣಾ ಪ್ರಚಾರ ಮಾಡುವಾಗ ಕೋವಿಡ್ ನಿಯಮ ಇರುವುದಿಲ್ವಾ..? ನಮಗೆ ಕೋವಿಡ್ ಪಾಠ ಮಾಡಲು ಬರಬೇಡಿ ಎಂದು ಕಿಡಿಕಾರಿದರು.