ಬೆಂಗಳೂರು: ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆ ಹಾಗೂ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಮಾರ್ಚ್.28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಸಚಿವ ಶ್ರೀರಾಮುಲು ಅವರ ಬಳ್ಳಾರಿ ನಿವಾಸದ ಬಳಿ ಮಾರ್ಚ್.28ರಿಂದ ಸಾರಿಗೆ ನೌಕರರು ಮತ್ತು ಕುಟುಂಬ ಸದಸ್ಯರು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. 2021ರ ಏಪ್ರಿಲ್ 7ರಂದು ನಡೆದ ಸಾರಿಗೆ ಮುಷ್ಕರದ ಸಮಯದಲ್ಲಿ ನಾಲ್ಕೂ ನಿಗಮಗಳಲ್ಲಿ ಸಾವಿರಾರು ನೌಕರರನ್ನು ವಜಾ, ವರ್ಗಾವಣೆ ಹಾಗೂ ಅಮಾನತು ಮಾಡಿ ನೂರಾರು ನೌಕರರ ವಿರುದ್ಧ ಸುಳ್ಳು ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಮೊದಲು ಈ ನಿಟ್ಟಿನಲ್ಲಿ ಎಲ್ಲವನ್ನು ಸರಿಪಡಿಸಬೇಕು. 2021ರ ಏಪ್ರಿಲ್ .6 ರಂದು ಇದ್ದ ಸ್ಥಿತಿಯಲ್ಲಿ ನೌಕರರಿಗೆ ಸೇವೆ ನೀಡಬೇಕು. ಜೊತೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಆಗ್ರಹಿಸಿದರು.
ಕಳೆದ 11 ತಿಂಗಳಿನಿಂದ ಕೂಟದ ಪದಾಧಿಕಾರಿಗಳು ಹಲವು ಬಾರಿ ಸಿಎಂ, ಸಾರಿಗೆ ಸಚಿವರಿಗೆ, ಹಲವು ಶಾಸಕರಿಗೆ ಹಾಗೂ ಆಡಳಿತ ಮಂಡಳಿಗೆ ನೌಕರರ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಮನವಿ ಮಾಡಿಕೊಂಡರೂ ಪೂರ್ಣವಾಗಿ ಸಮಸ್ಯೆ ಪರಿಹರಿಸಲಿಲ್ಲ. ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಉಪವಾಸ ಸತ್ಯಾಗ್ರಹವೊಂದೇ ಮಾರ್ಗವೆಂದು ತೀರ್ಮಾನಿಸಿದ್ದೇವೆ. ಸತ್ಯಾಗ್ರಹದ ವೇಳೆ ಅಸುನೀಗಿದರೂ ಸರಿಯೇ ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಸರ್ಕಾರ ಮತ್ತು ನಿಗಮಗಳು ಕಲ್ಪಿಸಿ ಕೊಡುವವರೆಗೂ ಹೋರಾಟ ವಾಪಸ್ ಪಡೆಯುವುದಿಲ್ಲ ಎಂದು ತಿಳಿಸಿದರು.
ಪ್ರಮುಖ ಬೇಡಿಕೆಗಳು: ಮುಷ್ಕರದ ಸಮಯದಲ್ಲಿ ಮಾಡಿರುವ ಎಲ್ಲ ವಜಾ ಪ್ರಕರಣಗಳನ್ನು ಯಾವುದೇ ಶಿಕ್ಷೆ, ದಂಡ ಮತ್ತು ನಿಬಂಧನೆ ವಿಧಿಸದೆ ಪುನರ್ ನೇಮಕ ಮಾಡಿಕೊಳ್ಳಬೇಕು. ಈಗಾಗಲೇ ತರಬೇತಿ ನೌಕರರನ್ನು ಹೊಸ ತರಬೇತಿ ನೌಕರರೆಂದು ಹಾಗೂ ಪರೀಕ್ಷಾರ್ಥ ನೌಕರರನ್ನು ಹೊಸ ಪರೀಕ್ಷಾರ್ಥಿ ಎಂಬ ಜಂಟಿ ಮೆಮೊಗಳಿಗೆ ಸಹಿ ಮಾಡಿಸಿಕೊಂಡಿಸಿಕೊಂಡಿರುವ ನಿಂಬಧನೆಗಳನ್ನು ರದ್ದು ಮಾಡಬೇಕು. ಕಾಯಂ ನೌಕರರನ್ನು ಯಾವುದೇ ನಿಬಂಧನೆಗಳನ್ನು ವಿಧಿಸದೇ ಪುನರ್ ನೇಮಕ ಮಾಡಿಕೊಳ್ಳಬೇಕು ಎಂದರು.
ಮುಷ್ಕರದ ಸಮಯದಲ್ಲಿ ನಾಲ್ಕು ನಿಗಮಗಳ ಸಾರಿಗೆ ನೌಕರರ ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ದಾಖಲಿಸಿರುವ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು. ಡಿಸೆಂಬರ್ 2020 ರಲ್ಲಿ ನಡೆದ ಸಾರಿಗೆ ಮುಷ್ಕರದ ಸಮಯದಲ್ಲಿ ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡುವುದಾಗಿ ಸರ್ಕಾರ ಲಿಖಿತ ಭರವಸೆ ನೀಡಿದ್ದು, ಈವರೆಗೆ ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡಿಲ್ಲ ಎಂದು ಹೇಳಿದರು.
ಈಗ ರಾಜ್ಯ ಸರ್ಕಾರಿ ನೌಕರರು, ಕೇಂದ್ರ ಸರ್ಕಾರಿ ನೌಕರರ ಸರಿಸಮಾನ ವೇತನಕ್ಕಾಗಿ ಹೋರಾಟ ಮಾಡುತ್ತಿದ್ದು, ಸರ್ಕಾರವು ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ತಾಂತ್ರಿಕ ಒಪ್ಪಿಗೆ ನೀಡಲಾಗಿದೆ. ಆದ್ದರಿಂದ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಸರಿ ಸಮಾನ ವೇತನವನ್ನು ಜನವರಿ 2020ರಿಂದ ಜಾರಿಗೆ ತಂದು ನಿಗದಿತ ಸಮಯದಲ್ಲಿ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಚಾಲ್ತಿಯಲ್ಲಿರುವ ನಾಲ್ಕು ವರ್ಷಕ್ಕೊಮ್ಮೆ ಮಾಡುವ ಚೌಕಾಸಿ ವೇತನ ಪರಿಷ್ಕರಣೆ ಪದ್ಧತಿ ಕೈಬಿಟ್ಟು ಸರ್ಕಾರದ ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿನ ವೇತನ ಆಯೋಗದ ಮಾದರಿಯನ್ನು ಅಳವಡಿಸಬೇಕು ಎಂದು ಚಂದ್ರಶೇಖರ್ ಒತ್ತಾಯಿಸಿದರು.
ಇದನ್ನೂ ಓದಿ: ಸ್ಕೂಟಿಯಲ್ಲಿ ಬರುತ್ತಿದ್ದಾಗಲೇ ಟ್ರಾನ್ಸ್ಫಾರ್ಮರ್ ಸ್ಫೋಟ: ಚಿಕಿತ್ಸೆ ಫಲಿಸದೇ ಅಪ್ಪ, ಮಗಳು ಸಾವು