ಬೆಂಗಳೂರು: ಮೂರು ದಿನದ ಸಾರಿಗೆ ನೌಕರರ ಮುಷ್ಕರ ಇದೀಗ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ವಿಕಾಸಸೌಧದಲ್ಲಿನ ಸರಣಿ ಸಭೆಗಳಲ್ಲಿ ಆಶಾದಾಯಕ ಬೆಳವಣಿಗೆ ಕಂಡುಬಂದಿದೆ.
ತಮ್ಮ ಬಿಗು ಪಟ್ಟಿನಿಂದ ಸ್ವಲ್ಪ ಸಡಿಲಿಕೆಯ ಮುನ್ಸೂಚನೆಯನ್ನು ಕಾರ್ಮಿಕ ಸಂಘಟನೆಗಳ ಮುಖಂಡರು ನೀಡಿದ್ದು, ಸರ್ಕಾರ ಕೂಡ ಒಂದು ಹೆಜ್ಜೆ ಮುಂದಿಟ್ಟಿದೆ. ಹೀಗಾಗಿ ಮಾತುಕತೆ ಸೌಹಾರ್ದ ಮತ್ತು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿದೆ.
ಇಂದಿನ ಸಭೆಗಳಲ್ಲಿ ಮಹತ್ವದ ತಿರುವು ನೀಡಿದ ಬೆಳವಣಿಗೆ ಅಂದರೆ, ಕೋಡಿಹಳ್ಳಿ ಬಣದ ಜೊತೆ ಗುರುತಿಸಿಕೊಂಡಿದ್ದ ಪ್ರಮುಖ ಮುಖಂಡರು ಚರ್ಚೆಗೆ ಒಪ್ಪಿ ಬಂದಿದ್ದಾರೆ. ಇವರನ್ನು ಸೆಳೆಯುವ ವಿಚಾರದಲ್ಲಿ ಸಚಿವ ಆರ್.ಅಶೋಕ್ ಹಾಗೂ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಪ್ರಮುಖ ಪಾತ್ರ ವಹಿಸಿದರು.
ಓದಿ: 'ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವುದು ಕಷ್ಟದ ಕೆಲಸ'
ಕೋಡಿಹಳ್ಳಿ ಜೊತೆ ಗುರುತಿಸಿಕೊಂಡಿದ್ದ ಮುಖಂಡರ ಜೊತೆ ಸಚಿವರಾದ ಸವದಿ, ಬೊಮ್ಮಾಯಿ, ಆರ್.ಅಶೋಕ್ ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ. ಅವರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಬಗ್ಗೆ ಸರ್ಕಾರ ಭರವಸೆ ನೀಡಿದೆ.
ಪ್ರಮುಖವಾಗಿ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ತನ್ನ ಸಹಮತ ವ್ಯಕ್ತಪಡಿಸಿದೆ. ನಾಲ್ಕು ವರ್ಷಕ್ಕೊಮ್ಮೆ ಆಗುವ ವೇತನ ಪರಿಷ್ಕರಣೆ ಈ ಬಾರಿ ಕೋವಿಡ್ ಹಿನ್ನೆಲೆ ವರ್ಷ ಕಳೆದರೂ ಆಗಿಲ್ಲ. 10-12% ವೇತನ ಪರಿಷ್ಕರಣೆ ಮಾಡಲು ಸರ್ಕಾರ ಆಸಕ್ತಿ ತೋರಿದೆ. ಜನವರಿ 2020ಕ್ಕೆ ಅನ್ವಯಿಸಿ ಪರಿಷ್ಕೃತ ವೇತನದ ಬಾಕಿಯನ್ನು ನೀಡುವಂತೆ ನೌಕರರು ಒತ್ತಾಯಿಸುತ್ತಿದ್ದಾರೆ.