ಬೆಂಗಳೂರು: ರಾಜ್ಯದ ನಾಲ್ಕು ನಿಗಮಗಳ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದು, ಸ್ಥಳಕ್ಕೆ ಸಾರಿಗೆ ಸಚಿವ ಲಕ್ಷಣ ಸವದಿ ಭೇಟಿ ನೀಡಿ ಮನವಿ ಸ್ವೀಕಾರ ಮಾಡಿದ್ದಾರೆ.
ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಚಿವ ಸವದಿ, ಅನೇಕ ವರ್ಷಗಳಿಂದ ಸಾರಿಗೆ ಇಲಾಖೆಯ ಸಿಬ್ಬಂದಿ ತಮಗೆ ಆಗುತ್ತಿರುವ ವೇತನ ತಾರತಮ್ಯ ತಪ್ಪಿಸಬೇಕು, ನೌಕರಿ ಭದ್ರತೆ ಬೇಕು, ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ ಮಾಡಿದ್ದಾರೆ. ಈಗಾಗಲೇ ನೌಕರರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬೇಡಿಕೆಗಳನ್ನು ಇಟ್ಟಿದ್ದಾರೆ. ಸಿಎಂ ಸಹ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ದಾರೆ ಎಂದರು.
ಈಗಾಗಲೇ ಈ ಬಗ್ಗೆ ಅಧಿಕಾರಿಗಳ ಒಂದು ಸಮಿತಿ ರಚನೆಯಾಗಿದೆ. ಅವರಿಗೆ ನಾನು ಇಲ್ಲೇ ಕೂತು ಅಧ್ಯಯನ ಮಾಡೋದು ಬೇಡ, ನೀವು ಪಕ್ಕದ ಆಂಧ್ರ ಮತ್ತು ತೆಲಂಗಾಣಕ್ಕೆ ತೆರಳಿ ಅಲ್ಲಿಯ ಆಗುಹೋಗುಗಳ ಅಧ್ಯಯನ ಮಾಡಬೇಕು ಎಂದು ಹೇಳಿದ್ದೇನೆ. ಸದ್ಯ ಸದನ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾವು ಬೇರೆ ವೇದಿಕೆಯಲ್ಲಿ ಯಾವುದೇ ಭರವಸೆ ನೀಡುವಂತಿಲ್ಲ ಎಂದು ಹೇಳಿದರು.
ಇನ್ನು ಡಿಸಿಎಂ ಮಾತನಾಡುತ್ತಿರುವಾಗ ಕೆಲವರು 'ಹೌದು ಹುಲಿಯಾ..' ಎಂದಾಗ ಹುಲಿಯಾ ನಾನಲ್ಲ ನನ್ನ ಎದುರು ಇರುವವರು ಎಂದು ನಗೆ ಚಟಾಕಿ ಹಾರಿಸಿದ ಪ್ರಸಂಗ ಕೂಡ ನಡೆಯಿತು.
ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ನಾಲ್ಕು ವರ್ಷಗಳ ಹಿಂದೆಯೇ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಆಗ್ರಹಿಸಲು ಮೂಲಭೂತ ಹಕ್ಕುಗಳ ವಿಚಾರ ವೇದಿಕೆ ನಿರ್ಧಾರಿಸಲಾಗಿತ್ತು. ಸಾರಿಗೆ ನೌಕರರನ್ನು ಸಹ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಆಗ್ರಹ ಮಾಡಿದರು.
ಸತ್ಯಾಗ್ರಹ ಯಾಕೆ...?
- ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸ್ಥಾನಮಾನ ಸಿಗ್ತಿಲ್ಲ
- ಯಾವುದೇ ಸರ್ಕಾರಿ ಸೇವೆಗಳು ಸಿಗ್ತಿಲ್ಲ
- ಸರ್ಕಾರಿ ನೌಕರರಾದ್ರೆ ವೇತನ ಆಯೋಗ ಅನ್ವಯ ಸಂಬಳ ಸಿಗಲಿದೆ
- ಬೆಲೆ ಏರಿಕೆಗೆ ಅನುಗುಣವಾಗಿ ಸಂಬಳವೂ ಏರಿಕೆಯಾಗಬೇಕು
- ಕಳೆದ 20 ವರ್ಷಗಳಿಂದ ಕೈಗಾರಿಕಾ ಒಪ್ಪಂದ ಆಗಿಲ್ಲ
- 20 ವರ್ಷದಲ್ಲಿ ಶೇ.37/5ರಷ್ಟು ಮಾತ್ರ ವೇತನ ಹೆಚ್ಚಳ
- ಸರಿಯಾದ ಸಮಯಕ್ಕೆ ಪಿಎಫ್, ಡಿಎ ಇಎಲ್ ಎನ್‌ಕ್ಯಾಶ್ಮೆಂಟ್ ಸಿಗ್ತಿಲ್ಲ
- ಸರ್ಕಾರಿ ನೌಕರರ ವೇತನಕ್ಕೆ ಹೋಲಿಸಿದ್ರೆ ಶೇ.60ರಷ್ಟು ಕಡಿಮೆ