ಬೆಂಗಳೂರು : ಕೊರೊನಾ ಸಂಕಷ್ಟದ ಸಮಯದಲ್ಲಿ ಸಾರಿಗೆ ನೌಕರರು ಕರ್ತವ್ಯ ನಿರ್ವಹಿಸಿದ್ದರು. ಅದರಂತೆ ಸರ್ಕಾರ ಕೋವಿಡ್ಗೆ ಬಲಿಯಾದ ನೌಕರರಿಗೆ ಪರಿಹಾರ ಕೊಡುವುದಾಗಿ ಹೇಳಿತ್ತು. ಆದರೀಗ ಪರಿಹಾರ ಹಣ ಕೊಡದೆ ಸಾರಿಗೆ ಇಲಾಖೆ ಹೊಸ ಕಥೆ ಹೇಳೋಕೆ ಶುರು ಮಾಡಿದೆ.
ಕೊರೊನಾದ ಸಂಕಷ್ಟದ ಕಾಲದಲ್ಲಿ ಪ್ರಾಣವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸಿದ್ದರು. ಮನೆಯ ಆಧಾರ ಸ್ತಂಭದಂತಿದ್ದ ಅನೇಕ ನೌಕಕರನ್ನು ಕೋವಿಡ್ ಬಲಿ ಪಡೆದಿದೆ. ಕೊರೊನಾ ಸಮಯದಲ್ಲಿ ಸಾರಿಗೆ ನೌಕರರು ಅನಿವಾರ್ಯವಾಗಿ ಕಾರ್ಯ ನಿರ್ವಹಿಸಿದ್ದರು.
ಅಗತ್ಯ ಸೇವೆಯಡಿ ಸಾರಿಗೆ ಬರುವುದರಿಂದ ನೀವು ಸಹ ಕೋವಿಡ್ ವಾರಿಯರ್ಸ್ ಎಂದ್ಹೇಳಿ ಸಾರಿಗೆ ಇಲಾಖೆ ಬಸ್‌ಗಳನ್ನು ರಸ್ತೆಗಿಳಿಸುವಂತೆ ತಿಳಿಸಿತು. ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನೌಕರರು ಕೋವಿಡ್ ಕಾರಣದಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ ₹30 ಲಕ್ಷ ಪರಿಹಾರ ನೀಡುವ ಘೋಷಣೆ ಮಾಡಿತ್ತು. ಸ್ವತಃ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರೇ ಘೋಷಣೆ ಮಾಡಿದ್ದರು.
ಕೋವಿಡ್ ಮೊದಲ ಅಲೆಯಲ್ಲಿ 38 ಹಾಗೂ ಎರಡನೇ ಅಲೆಯಲ್ಲಿ 69 ಬಿಎಂಟಿಸಿ ನೌಕರರು ಕೋವಿಡ್ಗೆ ಬಲಿಯಾಗಿದ್ದಾರೆ. ಹಾಗೆ ಕೆಎಸ್ಆರ್ಟಿಸಿಯಲ್ಲಿ ನೂರಾರು ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಆದರೆ, ಬಹಳ ಉತ್ಸಾಹದಿಂದ 30 ಲಕ್ಷ ಪರಿಹಾರ ಕೊಡುತ್ತೀವಿ ಎಂದಿದ್ದ ಸಾರಿಗೆ ಸಚಿವರು ಈಗ ಮೌನಕ್ಕೆ ಶರಣಾಗಿದ್ದಾರೆ. ಇಷ್ಟು ಮಾತ್ರವಲ್ಲದೇ ಹೊಸ ಹೊಸ ನಿಯಮಗಳನ್ನು ತಂದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನ ಸಾರಿಗೆ ಇಲಾಖೆ ಮಾಡುತ್ತಿದೆ.
ಈತನಕ ಒಟ್ಟು 239 ಕೋವಿಡ್ ಮೃತ ಕುಟುಂಬಗಳ ಪೈಕಿ ಕೇವಲ 4 ಮಂದಿಗೆ ಮಾತ್ರ ಪರಿಹಾರ ನೀಡಲಾಗಿದೆ. ಉಳಿದವರೆಲ್ಲ ರಜೆಯಲ್ಲಿದ್ದಾಗ ಸಾವಿಗೀಡಾಗಿದ್ದು, ನಿಯಮದ ಪ್ರಕಾರ ರಜೆಯಲ್ಲಿದ್ದಾಗ ಪರಿಹಾರ ನೀಡೋಕೆ ಅಸಾಧ್ಯ ಎಂದು ಸಾರಿಗೆ ಇಲಾಖೆ ಹೊಸ ಖ್ಯಾತೆ ತೆಗೆದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಎಂಟಿಸಿ ಉಪಾಧ್ಯಕ್ಷ ಎಂ ಆರ್ ವೆಂಕಟೇಶ್, ಕೊರೊನಾದಿಂದ ಮೃತಪಟ್ಟರಿಗೆ ಪರಿಹಾರದ ಮೊತ್ತವನ್ನು ನಾಲ್ಕು ಕುಟುಂಬಕ್ಕೆ ನೀಡಲಾಗಿದೆ. ಉಳಿದ ನೌಕರರು ಕುಟುಂಬಕ್ಕೆ ಪರಿಹಾರ ನೀಡಲು ಕಾನೂನು ತೊಡಕು ಉಂಟಾಗಿದೆ. ನಿಧನಕ್ಕೂ ಹಿಂದಿನ ಸಮಯ ಯಾವುದೇ ಸಿಬ್ಬಂದಿ ಕನಿಷ್ಠ 14 ದಿನಗಳ ಕಾಲ ಕರ್ತವ್ಯ ನಿರ್ವಹಿಸಿರಬೇಕು ಎಂಬ ಮಾನದಂಡವನ್ನು ನಿಗದಿ ಮಾಡಲಾಗಿದೆ.
ಈ ಮಾನದಂಡದ ಪ್ರಕಾರ ನಾಲ್ವರಿಗೆ ಪರಿಹಾರ ಹಣ ತಲುಪಿಸಲಾಗಿದೆ. ಉಳಿದವರಿಗೆ ಹಾಜರಾತಿ ಕೊರತೆ ಇದ್ದು, ಪರಿಹಾರ ಕೊಡಬೇಕೋ, ಬೇಡವೋ ಅಥವಾ ಯಾವ ರೀತಿ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದರ ಕುರಿತು ನಿರ್ದೇಶಕ ಮಂಡಳಿಗೆ ಬರಬೇಕಿದೆ. ನಿರ್ದೇಶಕ ಮಂಡಳಿ ಸಭೆಯಲ್ಲಿ ವಿಷಯ ಬಂದಾಗ, ಅಲ್ಲಿ ಸ್ಪಷ್ಟ ನಿರ್ಧಾರ ಕೈಗೊಂಡು ಮಾನವೀಯತೆ ಆಧಾರದಲ್ಲಿ ಪರಿಹಾರ ಕೊಡಿಸುವ ಕೆಲಸ ಮಾಡಲಾಗುತ್ತೆ ಎಂದರು.