ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಉದ್ಯೋಗಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ.1 ರಷ್ಟು ಮೀಸಲಾತಿ ಕಲ್ಪಿಸಿ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮಂಗಳಮುಖಿಯರು ಧನ್ಯವಾದ ಅರ್ಪಿಸಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಗೆ ಮಂಗಳಮುಖಿಯರು ಭೇಟಿ ನೀಡಿದರು. ಆದರೆ ರಾಜಕೀಯ ಚಟುವಟಿಕೆಗಳು ಹೆಚ್ಚಾಗಿದ್ದು, ಸಚಿವರು ಮತ್ತು ಸ್ವಾಮೀಜಿಗಳ ನಿಯೋಗ ನಿರಂತರವಾಗಿ ಸಿಎಂ ನಿವಾಸಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಬೆಳಗ್ಗೆ ಮಂಗಳಮುಖಿಯರ ನಿಯೋಗಕ್ಕೆ ಸಿಎಂ ಭೇಟಿ ಮಾಡಲು ಅನುಮತಿ ನೀಡಲಿಲ್ಲ. ಸಾಕಷ್ಟು ಪ್ರಯತ್ನದ ನಂತರ ಮಧ್ಯಾಹ್ನ 3 ಗಂಟೆಗೆ ಸಮಯ ನೀಡಲಾಯಿತು.
ಅದರಂತೆ ಮಧ್ಯಾಹ್ನ ಮತ್ತೆ ಆಗಮಿಸಿದ ಮಂಗಳಮುಖಿಯರು ಬಿಎಸ್ವೈ ಅವರನ್ನು ಭೇಟಿಯಾದರು. ಇಡೀ ದೇಶದಲ್ಲಿ ತೃತೀಯ ಲಿಂಗಿಗಳಿಗೆ ಸರ್ಕಾರಿ ಹುದ್ದೆಗಳಲ್ಲಿ ಮೀಸಲು ಕಲ್ಪಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದಕ್ಕಾಗಿ ತೃತೀಯ ಲಿಂಗಿಗಳ ಪರ ಧನ್ಯವಾದ ಅರ್ಪಿಸಿದರು.
ನಂತರ ಮಾತನಾಡಿದ ಮಂಗಳಮುಖಿಯರು, ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡಿದ್ದಾರೆ. ನಮಗೆ ಅನೇಕ ಅನುಕೂಲ ಕಲ್ಪಿಸಿದ್ದಾರೆ. ಹಾಗಾಗಿ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂದು ಬೆಂಬಲ ವ್ಯಕ್ತಪಡಿಸಿದರು.
ಆಂಧ್ರ-ತೆಲಂಗಾಣ ಲಿಂಗಾಯತ ಸಮುದಾಯ ಬೆಂಬಲ: ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಬೇಕು ಎಂದು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವೀರಶೈವ ಲಿಂಗಾಯತ ಸಮುದಾಯ ಆಗ್ರಹಿಸಿದೆ. ಉಭಯ ರಾಜ್ಯಗಳ ಸಮುದಾಯದ ನಿಯೋಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು. ಕಾವೇರಿಯಲ್ಲಿ ಕೆಲಕಾಲ ಮಾತುಕತೆ ನಡೆಸಿ ಬಿಎಸ್‌ವೈಗೆ ಬೆಂಬಲ ವ್ಯಕ್ತಪಡಿಸಿತು.
ಇದನ್ನೂ ಓದಿ: ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ: ಬಿ. ಎಸ್. ಯಡಿಯೂರಪ್ಪ