ಬೆಂಗಳೂರು: ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುವುದಿಲ್ಲ ಎಂದು ಭಾವಿಸಿ ಸಂಚಾರಿ ನಿಯಮಗಳನ್ನ ಗಾಳಿಗೆ ತೂರಿದ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಕೇವಲ ಎರಡು ಗಂಟೆಗಳಲ್ಲಿ 23,90,900 ರೂಪಾಯಿ ದಂಡ ವಸೂಲಿ ಮಾಡುವ ಮೂಲಕ, ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಪೊಲೀಸರು ಈ ಮೂಲಕ ಖಡಕ್ ಸಂದೇಶ ರವಾನಿಸಿದ್ದಾರೆ. ನಗರದ 44 ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ 178 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ, 5,123 ವಿವಿಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ 23ಕ್ಕೂ ಲಕ್ಷಕ್ಕೂ ಹೆಚ್ಚು ದಂಡ ಸಂಗ್ರಹಿಸಿದ್ದಾರೆ.
ಇದನ್ನೂ ಓದಿ : ತಿಂಗಳಿಗೆ 850 ಟನ್ ಕೋವಿಡ್ -19 ಲಸಿಕೆ ಪೂರೈಸಲಿರುವ ಯುನಿಸೆಫ್
ಕಾರ್ಯಾಚರಣೆಯು ವಾಹನ ದಟ್ಟಣೆ ಸಮಯವಲ್ಲದ ವೇಳೆ ದಂಡ ಸಂಗ್ರಹಿಸಿರುವುದು ಮತ್ತೊಂದು ವಿಶೇಷ. ರಾಜಧಾನಿಯಲ್ಲಿ ಇತ್ತೀಚಿಗೆ ರಸ್ತೆ ಅಪಘಾತ ಜೊತೆಗೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರಲ್ಲಿ ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಯೂ ಇಂತಹದ್ದೇ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ನಗರ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ. ಬಿ. ಆರ್. ರವಿ ಕಾಂತೇಗೌಡ ತಿಳಿಸಿದ್ದಾರೆ.