ಬೆಂಗಳೂರು: ಹೊಸ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದೊಡ್ಡ ಮಟ್ಟದಲ್ಲಿ ದಂಡ ವಿಧಿಸಲಾಗುತ್ತಿದ್ದು, ಇದರಿಂದ ಜನ ಕಂಗೆಟ್ಟಿದ್ದಾರೆ. ಆದರೆ ಈಗ ಮತ್ತೊಂದು ನಿಯಮವನ್ನು ಜಾರಿಗೆ ತಂದಿದ್ದು, ಆಟೋ, ಓಲಾ, ಉಬರ್ ಕ್ಯಾಬ್ ಚಾಲಕರು ಹವಾಯಿ ಚಪ್ಪಲಿ ಹಾಗೂ ಲುಂಗಿ ಧರಿಸಿ ವಾಹನ ಚಾಲನೆ ಮಾಡಿದರೆ ದಂಡ ಹಾಕಲು ಟ್ರಾಫಿಕ್ ಪೊಲೀಸರು ರೆಡಿಯಾಗಿದ್ದಾರೆ.
ಸಾರ್ವಜನಿಕರನ್ನು ಕರೆದೊಯ್ಯುವ ಆಟೋ, ಓಲಾ, ಉಬರ್ ಕ್ಯಾಬ್ ಚಾಲಕರು, ಹವಾಯಿ ಚಪ್ಪಲಿ ಹಾಗೂ ಲುಂಗಿ ಧರಿಸಿ ವಾಹನ ಚಾಲನೆ ಮಾಡಿದರೆ ಅಂತವರಿಗೂ ಭಾರೀ ಮೊತ್ತದ ದಂಡ ಹಾಕಲು ಟ್ರಾಫಿಕ್ ಪೊಲೀಸರು ರೆಡಿಯಾಗಿದ್ದಾರೆ. ಚಪ್ಪಲಿ ಧರಿಸಿ ದ್ವಿಚಕ್ರ ವಾಹನ ಚಾಲನೆ ಮಾಡಿದ್ರೂ ಕೂಡಾ 1000 ರೂಪಾಯಿಯವರೆಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಇನ್ನು ಈ ಕುರಿತು ಮಾಧ್ಯಮಗಳೊಂದಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಖಾಸಗಿ ವಾಹನಗಳಾದ ಕಾರು, ಬೈಕ್, ಸ್ಕೂಟಿ ಇವುಗಳನ್ನು ಯಾವುದೇ ಉಡುಪು ಹಾಕಿಕೊಂಡು ಓಡಿಸಬಹುದು. ಯಾವುದೇ ಅಭ್ಯಂತರವಿಲ್ಲ. ಆದರೆ ಸಾರ್ವಜನಿಕ ಸೇವಾ ವಾಹನಗಳಿಗೆ ಅದರದ್ದೇ ಆದ ಸಮವಸ್ತ್ರವಿದೆ. ಆಟೋ, ಓಲಾ, ಉಬರ್ ಕ್ಯಾಬ್ ಚಾಲಕರು ಸಮವಸ್ತ್ರವನ್ನು ಹಾಕಿಕೊಳ್ಳಲೇಬೇಕು. ಏಕೆಂದರೆ ಸಾಮಾಜಿಕ ಜವಾಬ್ದಾರಿ ಅವರ ಮೇಲಿದ್ದು, ಮೋಟಾರು ವಾಹನ ಕಾಯ್ದೆಯ ಡ್ರೆಸ್ ಕೋಡ್ಗೆ ಗೌರವ ಕೊಡಬೇಕು ಎಂದರು.
ಹವಾಯಿ ಚಪ್ಪಲಿ ಹಾಕಿಕೊಂಡು ವಾಹನಗಳನ್ನ ಓಡಿಸಿದ್ರೆ ಅದು ಮೋಟಾರ್ ವಾಹನ ಕಾಯ್ದೆ ಶಿಸ್ತನ್ನು ಉಲ್ಲಂಘನೆ ಮಾಡಿದ ಹಾಗೆ. ವಾಹನ ಚಾಲಕರ ಸುರಕ್ಷತೆ ದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ತಪ್ಪು ಮಾಡಿದ್ರೆ ಭಾರಿ ದಂಡ ವಸೂಲಿ ಮಾಡಲಾಗುವುದು. ಆದ್ರೆ ಖಾಸಗಿ ವ್ಯಕ್ತಿಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ತಿಳಿಸಿದರು.