ಬೆಂಗಳೂರು: ಕೊರೊನಾ ಮಾಹಾಮಾರಿ ಒಬ್ಬ ವ್ಯಕ್ತಿಯಲ್ಲಿ ಕಾಣಿಸಿಕೊಂಡಾಗ ಆತನ ಜೊತೆ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚೋದೇ ಅತಿ ದೊಡ್ಡ ಸವಾಲಿನ ಕೆಲಸ. ಆತನಿಗೆ ಯಾವ ರೀತಿ ಸೋಂಕು ಹರಡಿತು? ಸೋಂಕು ಹಬ್ಬಿದ ವೇಳೆ ಆತ ಯಾರೊಂದಿಗೆ ಸಂಪರ್ಕ ಹೊಂದಿದ್ದ? ಎಲ್ಲೆಲ್ಲಿ ಕೆಲಸ ಮಾಡಿದ್ದ? ಎಂಬುದರ ಜೊತೆಗೆ ಆತನ ಜಾತಕವನ್ನೇ ಜಾಲಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಸದ್ಯ ಕೊರೊನಾ ಸೋಂಕು ಪತ್ತೆಯಾದಾಗ ಆರೋಗ್ಯಾಧಿಕಾರಿಗಳು, ಹಾಗೆ ಸಂಬಂಧಪಟ್ಟ ಪಾಲಿಕೆಯವರು ಕೊರೊನಾ ಮಹಾಮಾರಿಗೆ ಒಳಗಾದ ವ್ಯಕ್ತಿಯ ವಾಸದ ಪ್ರದೇಶಕ್ಕೆ ತೆರಳಿ ಸೀಲ್ಡೌನ್ ಮಾಡ್ತಾರೆ. ಆದರೆ ಕೊರೊನಾ ಸೋಂಕಿತನ ಜೊತೆ ಯಾರೆಲ್ಲಾ ಸಂಪರ್ಕ ಹೊಂದಿದ್ರು ಅನ್ನೋದ್ರ ಸಂಪೂರ್ಣ ಮಾಹಿತಿಯನ್ನು ಪೊಲೀಸರು ನೀಡಬೇಕಾಗುತ್ತದೆ. ಈ ಕಾರ್ಯಚರಣೆಯೇ ಅವರಿಗೆ ಸವಾಲಾಗುತ್ತದೆ.
ರಾಜ್ಯದಲ್ಲಿ ಈಗ ಒಟ್ಟು 532 ಮಂದಿ ಸೋಂಕಿತರಿದ್ದು, ಇವರ ಟವರ್ ಲೊಕೇೆಷನ್ ಹಾಗೂ ಸಿಡಿಆರ್ ಅಂದರೆ ಒಬ್ಬ ಸೋಂಕಿತ ವ್ಯಕ್ತಿ ಯಾರ ಜೊತೆ ನಿಕಟ ಸಂಪರ್ಕ ಹೊಂದಿದ್ದ?, ಯಾರನ್ನು ಭೇಟಿಯಾಗಿದ್ದ?, ಯಾರ ಜೊತೆ ಸಮಯ ಕಳೆದಿದ್ದ? ಎಂಬ ಮಾಹಿತಿಯನ್ನು ಪೊಲೀಸರೇ ಪತ್ತೆ ಹಚ್ಚಬೇಕು.
ಇನ್ನು ಇದರ ಕುರಿತು ಪೊಲೀಸರ ಬಳಿ ವಿಚಾರಿಸಿದಾಗ ಇಷ್ಟು ದಿನ ರಾಜ್ಯದಲ್ಲಿ ಅಪರಾಧಗಳು ವರದಿಯಾದಾಗ ಆರೋಪಿಯ ಹಿನ್ನೆಲೆ ಕಲೆ ಹಾಕೋದಕ್ಕೆ ಟವರ್ ಲೊಕೇಷನ್ ಮತ್ತು ಸಿಡಿಆರ್ ಬಳಕೆ ಮಾಡುತ್ತಿದ್ದೆವು. ಸದ್ಯ ಕೊರೊನಾ ಸೋಂಕಿತರ ಈ ಮೂಲಕವೇ ಪತ್ತೆ ಹಚ್ಚಲಾಗುತ್ತಿದೆ. ಈ ಮಾಹಿತಿಯನ್ನು ಸಂಬಂಧಪಟ್ಟ ಪಾಲಿಕೆ ಹಾಗೂ ಆರೋಗ್ಯ ಅಧಿಕಾರಿಗಳಿಗೆ ನೀಡಬೇಕು. ಆಗ ಕೊರೊನಾ ಸೋಂಕಿತನ ಸಂಪರ್ಕ ಹೊಂದಿದ್ದ ವ್ಯಕ್ತಿಯನ್ನು ಪ್ರಾಥಮಿಕವಾಗಿ ಕ್ವಾರಂಟೈನ್ ನಡೆಸಲಾಗುತ್ತದೆ. ನಂತರ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.