ಬೆಂಗಳೂರು: ನಾಳೆ ಯುಗಾದಿ ಹಬ್ಬ ಇರುವುದರಿಂದ ಜೊತೆಗೆ ಲಾಕ್ಡೌನ್ ಬಿಗಿಯಾಗುವುದರಿಂದ ನಗರದಿಂದ ಹೊರ ಹೋಗಲು ಮತ್ತು ಒಳ ಬರಲು ಬರಲು ಇಂದು ರಾತ್ರಿಯವರೆಗೆ ಅಂತಿಮ ಗಡುವು ವಿಧಿಸಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಬಿಬಿಎಂಪಿ ಕಚೇರಿಯಲ್ಲಿ ಮಾತನಾಡಿ, ನಗರಕ್ಕೆ ಬರುವವರಿಗೆ ಮತ್ತು ಹೊರ ಹೋಗುವವರಿಗೆ ಇಂದು ರಾತ್ರಿಯವರೆಗೆ ಅವಕಾಶವಿದೆ. ನಾಳೆಯಿಂದ ಪ್ರವೇಶ ನಿರ್ಬಂಧ ಮಾಡಲಾಗುವುದು. ನಾಳೆಯಿಂದ ಎಲ್ಲಿ ಇರ್ತೀರೋ ಅಲ್ಲೇ ಇರಬೇಕು. ಕಠಿಣ ನಿರ್ಬಂಧ ಜಾರಿಯಾಗುತ್ತದೆ. ಅದನ್ನು ಜನರು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.
ನಾಳೆ ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸಿ. ಹೊರಗೆ ಬರದೆ ಎಚ್ಚರ ವಹಿಸಿ ಎಂದು ಜನತೆಗೆ ಸಿಎಂ ಮನವಿ ಮಾಡಿದರು. ಸಚಿವ ಸುಧಾರ್ಗೆ ಕೊರೊನಾ ನಿರ್ವಹಣೆ ಜವಾಬ್ದಾರಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಸಚಿವರಾದ ಶ್ರೀರಾಮುಲು ಮತ್ತು ಸುಧಾಕರ್ ಇಬ್ಬರಿಗೂ ಕೊರೊನಾ ನಿರ್ವಹಣೆ ಜವಾಬ್ದಾರಿ ನೀಡಿದ್ದೇವೆ. ಸುಧಾಕರ್ ಅವರು ಬೆಂಗಳೂರಿನಲ್ಲೇ ಇದ್ದು ಕೊರೊನಾ ವಿಚಾರಗಳ ನಿರ್ವಹಣೆ ಮಾಡ್ತಾರೆ. ರಾಮುಲು ಅವರು ರಾಜ್ಯಾದ್ಯಂತ ಓಡಾಟ ನಡೆಸ್ತಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನಾವೆಲ್ಲರೂ ಒಟ್ಟಾಗಿ ಕೊರೊನಾ ನಿಯಂತ್ರಣಕ್ಕೆ ಕೆಲಸ ಮಾಡ್ತಿದ್ದೀವಿ ಎಂದರು.
ದೇಶದಲ್ಲೇ ಮೊದಲ ಬಾರಿಗೆ 24/7 ವಾರ್ ರೂಂ ಮಾಡಿದ್ದೀವಿ. ಕೋವಿಡ್ ಸೋಂಕು ಬಾಧಿತರು ಇಲ್ಲಿ ಮಾಹಿತಿ ಇಲ್ಲಿ ಪಡೆಯಬಹುದು. ರಾಜ್ಯದ ಎಲ್ಲ ಜಿಲ್ಲೆಗಳ ಕೊರೊನಾ ಭಾದಿತರ ಮೇಲೆ ಇಲ್ಲಿಂದಲೇ ನಿಗಾ ಇಡಬಹುದು. ವಿದೇಶದಿಂದ ಬಂದ 12,029 ಪ್ರಯಾಣಿಕರನ್ನು ಕ್ವಾರಂಟೈನ್ಲ್ಲಿ ಇಡಲಾಗಿದೆ. ಇಲ್ಲಿಯವರೆಗೆ 38 ಪಾಸಿಟಿವ್ ಪ್ರಕರಣ ಕಂಡು ಬಂದಿದೆ ಎಂದರು.