ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್ ವಿರುದ್ಧ ಫೇಸ್ ಬುಕ್ನಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪ ಮಾಡಿದ್ದ, ವಕೀಲ ಜಗದೀಶ್ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿರುವುದನ್ನು ಖಂಡಿಸಿ ವಕೀಲರು ಹೋರಾಟ ನಡೆಸಲು ಮುಂದಾಗಿದ್ದಾರೆ.
ಈ ಕುರಿತಂತೆ ಪೂರ್ವಭಾವಿ ಸಭೆ ನಡೆಸಲು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್ ಮುಂದಾಗಿದ್ದಾರೆ. ನಾಳೆ ಸಂಜೆ ಸಭೆ ನಡೆಸಲು ತೀರ್ಮಾನಿಸಿದ್ದು, ಸಮಾನ ಮನಸ್ಕ ವಕೀಲರು ಹಾಗೂ ವಕೀಲರ ಸಂಘಟನೆಗಳು ಸಭೆಗೆ ಆಗಮಿಸುವಂತೆ ಕರೆ ನೀಡಿದ್ದಾರೆ.
ಬೆಂಗಳೂರಿನ ಕೆ.ಆರ್. ವೃತ್ತದಲ್ಲಿರುವ ಯುುವಿಸಿಇ ಹಳೆಯ ವಿದ್ಯಾರ್ಥಿಗಳ ಸಂಘದ ಸಭಾ ಭವನದಲ್ಲಿ ಸಭೆ ನಡೆಯಲಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದ ವಕೀಲ ಜಗದೀಶ್ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಲಾಗಿದೆ. ಇದು ಸುಳ್ಳು ಎಂದಿರುವ ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್ ಅವರು, ಪೊಲೀಸ್ ಇಲಾಖೆಯ ಕ್ರಮ ಖಂಡಿಸಿ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ. ಹೋರಾಟಕ್ಕೆ ಪೂರ್ವಭಾವಿಯಾಗಿ ಈ ಸಭೆ ಆಯೋಜಿಸಲಾಗಿದೆ.
ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್ ವಿರುದ್ಧ ಆರೋಪಗಳನ್ನು ಮಾಡಿದ ಬಳಿಕ ಜಗದೀಶ್ ಸಂಕಷ್ಟಕ್ಕೆ ಸಿಲುಕಿದ್ದರು. ಫೇಸ್ ಬುಕ್ನಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪಗಳನ್ನು ಮಾಡಿದ ಬಳಿಕ ಜಗದೀಶ್ ಅವರ ವಿರುದ್ಧ ಮಾನಹಾನಿ ದಾವೆ ದಾಖಲಿಸಲಾಗಿತ್ತು.
ಇದನ್ನೂ ಓದಿ : ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ: ನ್ಯಾಯ ಸಿಗುವವರೆಗೂ ಹೋರಾಡೋಣ ಎಂದ ಖುಷ್ಬೂ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಸಿಟಿ ಸಿವಿಲ್ ಕೋರ್ಟ್ನಲ್ಲಿ ವಿಚಾರಣೆಗೆ ಹಾಜರಾದ ವೇಳೆ ಕೆಲ ವಕೀಲರು ಹಾಗೂ ನ್ಯಾಯಾಂಗ ಅಧಿಕಾರಿಗಳೊಂದಿಗೆ ಗದ್ದಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಫೆ.11ರಂದು ಜಗದೀಶ್ ಪುತ್ರನ ಮೇಲೆ ಹಲ್ಲೆ ನಡೆದಿತ್ತು. ಅದಾದ ಬಳಿಕ ವಕೀಲ ನಾರಾಯಣಸ್ವಾಮಿ ನೀಡಿದ ಕೊಲೆ ಯತ್ನ ದೂರಿನ ಮೇರೆಗೆ ಪೊಲೀಸರು ವಕೀಲ ಜಗದೀಶ್ ಅವರನ್ನು ಬಂಧಿಸಿದ್ದರು.