ಬೆಂಗಳೂರು: ಇಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದ್ದು, ಕೊರೊನಾ ಸಾಂಕ್ರಾಮಿಕ ಕಾಯಿಲೆ ಎದುರಿಸುತ್ತಿರುವ ಈ ಸಂದರ್ಭದಲ್ಲೂ ಜನಸಂಖ್ಯಾ ಸ್ಫೋಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.
ಈ ವರ್ಷ ವಿಪತ್ತಿನಲ್ಲಿಯೂ ಕುಟುಂಬ ಯೋಜನೆಯ ತಯಾರಿ, ಸದೃಢ ರಾಷ್ಟ್ರ ಮತ್ತು ಕುಟುಂಬದ ಸಂಪೂರ್ಣ ಜವಾಬ್ದಾರಿ ಎಂಬ ಘೋಷವಾಕ್ಯ ಘೋಷಣೆ ಮಾಡಲಾಗಿದೆ. ಜನಸಂಖ್ಯಾ ಸ್ಫೋಟದಿಂದ ಆಗುವ ಅನಾಹುತಗಳು ಹಾಗೂ ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜುಲೈ 11ರಂದು ಜನಸಂಖ್ಯಾ ದಿನ ಆಚರಿಸಲಾಗುತ್ತದೆ.
ಈ ಕುರಿತು ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್, ಸಮಸ್ಯೆಗಳು ಮತ್ತು ಆರೋಗ್ಯಕರ ಜೀವನ ಹಾಗೂ ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯ. ಜನಸಂಖ್ಯಾ ಸ್ಫೋಟದಿಂದಾಗುವ ಅಪಾಯಗಳು, ಕುಟುಂಬ ಯೋಜನೆಗೆ ಆದ್ಯತೆ, ಲಿಂಗ ಅಸಮಾನತೆ, ಬಡತನ, ಶಿಶು ಮರಣ, ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ ಅಂತ ತಿಳಿಸಿದ್ದಾರೆ.
ಆರೋಗ್ಯ ಸಚಿವ ಶ್ರೀರಾಮುಲು ಸಹ ಟ್ವೀಟ್ ಮಾಡಿದ್ದು, ಜಾಗತಿಕ ಮಹಾಮಾರಿ ಕೊರೊನಾ ಸೋಂಕಿನ ಸಂದರ್ಭದಲ್ಲಿ ಮಹಿಳೆ ಮತ್ತು ಬಾಲಕಿಯರ ಆರೋಗ್ಯ ಮತ್ತು ಹಕ್ಕುಗಳನ್ನು ಕಾಪಾಡಬೇಕೆನ್ನುವುದು ಈ ಬಾರಿಯ ಘೋಷ ವಾಕ್ಯವಾಗಿದ್ದು, ಚಿಕ್ಕ ಚೊಕ್ಕ ಕುಟುಂಬದ ಅಗತ್ಯವನ್ನು ಕುರಿತು ಎಲ್ಲರಲ್ಲೂ ತಿಳುವಳಿಕೆ ಮೂಡಿಸಬೇಕು ಎಂದಿದ್ದಾರೆ.