ಬೆಂಗಳೂರು: ಪೂರ್ವ ಅರಬ್ಬಿಸಮುದ್ರದ ಕರ್ನಾಟಕ ಹಾಗೂ ಕೇರಳ ಕರಾವಳಿಯಲ್ಲಿ ಕಡಿಮೆ ಒತ್ತಡ ಇರುವ ವಿಸ್ತರಿಸಿದ ಪ್ರದೇಶವಿದೆ. ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಸೇರಿಂದತೆ ಒಳನಾಡಿನ ಒಂಬತ್ತು ಜಿಲ್ಲೆಗಳಿಗೆ ಶನಿವಾರ( ಆಗಸ್ಟ್ 28) ಹಾಗೂ ಭಾನುವಾರ(ಆಗಸ್ಟ್ 29) ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಆಗಸ್ಟ್ 28ರಿಂದ 31ರ ವರೆಗೆ ಕರಾವಳಿಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಆಗಸ್ಟ್ 28 ಮತ್ತು 29ರಂದು ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಆಗಸ್ಟ್ 30 ಮತ್ತು 31ರಂದು ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಹಾಗೂ ಅತಿ ಭಾರಿ ಮಳೆಯನ್ನು ನಿರೀಕ್ಷಿಸಲಾಗಿದ್ದು, ಆಗಸ್ಟ್ 28 ಮತ್ತು 29ರಂದು ಆರೆಂಜ್ ಅಲರ್ಟ್ ಹಾಗೂ 30ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮಳೆಯಾಗುವ ನಿರೀಕ್ಷೆಯಿದೆ. ಗರಿಷ್ಠ ಉಷ್ಣಾಂಶ 28 ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಇರಲಿದೆ ಎಂದು ಹೇಳಿದ್ದಾರೆ.
ರಾಜ್ಯದ ಒಳನಾಡಿನಲ್ಲಿ ವ್ಯಾಪಕ ಮಳೆ: ನೈರುತ್ಯ ಮುಂಗಾರು ಶುಕ್ರವಾರ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಚುರುಕಾಗಿತ್ತು. ಕರಾವಳಿಯಲ್ಲಿ ವ್ಯಾಪಕ ಮಳೆಯಾಗಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಬುಹತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗಿದೆ.
ಶಿವಮೊಗ್ಗದ ಆಗುಂಬೆಯಲ್ಲಿ 13 ಸೆಂ.ಮೀ., ಉಡುಪಿಯ ಕಾರ್ಕಳದಲ್ಲಿ 7 ಸೆಂ.ಮೀ, ಕೋಲಾರದ ಕೆಜಿಎಫ್, ಕೊಡಗಿನ ಭಾಗಮಂಡಲದಲ್ಲಿ ತಲಾ 5 ಸೆಂ.ಮೀ, ಶಿರಾಲಿ, ಕಾರವಾರ, ಉತ್ತರ ಕನ್ನಡದ ಭಟ್ಕಳ, ಆನೇಕಲ್, ತುಮಕೂರಿನ ಬುಕ್ಕಪಟ್ಟಣ, ಕೋಲಾರದ ಬಂಗಾರಪೇಟೆಯಲ್ಲಿ ತಲಾ 4 ಸೆಂ.ಮೀ, ಶಿವಮೊಗ್ಗದ ತಾಳಗುಪ್ಪ, ಬೆಂಗಳೂರು ನಗರ, ಚಾಮರಾಜನಗರದ ಎಂ.ಎಂ. ಹಿಲ್ಸ್, ಬಳ್ಳಾರಿಯ ಹಡಗಲಿಯಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.