ಬೆಂಗಳೂರು : ನಗರದ ಹೊರವರ್ತುಲ ರಸ್ತೆಯ ಸುಮನಹಳ್ಳಿ ಮೇಲ್ಸೇತುವೆ ಮಧ್ಯದಲ್ಲೇ ಗುಂಡಿ ಬಿದ್ದು, ಕಾಂಕ್ರೀಟ್ ಪದರ ಸಂಪೂರ್ಣ ಕಿತ್ತು ಹೋಗಿದ್ದು, ಇಂದು ಮೇಯರ್ ಗೌತಮ್ ಕುಮಾರ್, ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಮೇಲ್ಸೇತುವೆ ಪರಿಶೀಲನೆ ನಡೆಸಿದರು.
ನಗರದ ಹೊರವರ್ತುಲ ರಸ್ತೆಯ ಸುಮನಹಳ್ಳಿ ಮೇಲ್ಸೇತುವೆಯನ್ನು 2010ರಲ್ಲಿ ಬಿಡಿಎ ನಿರ್ಮಾಣ ಮಾಡಿದ್ದು, ಬಳಿಕ ಇದನ್ನು ಬಿಬಿಎಂಪಿಗೆ ನಿರ್ವಹಣೆಗಾಗಿ ಹಸ್ತಾಂತರಿಸಿತ್ತು. ಆದರೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೇಲ್ಸೇತುವೆಯಲ್ಲಿ ನೀರು ನಿಂತು ಗುಂಡಿಗಳು ನಿರ್ಮಾಣವಾಗಿವೆ. ಅಷ್ಟೇ ಅಲ್ಲದೇ ರಸ್ತೆಯಲ್ಲಿನ ಗುಂಡಿ ಕಾಂಕ್ರೀಟ್ ಸಮೇತ ಕಿತ್ತು ಬಂದಿದ್ದು, ಕೇವಲ ಕಂಬಿಗಳು ಕಾಣುತ್ತಿವೆ. ಇದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದ್ದು ಸಂಚಾರವನ್ನು ನಿಷೇಧಿಸಲಾಗಿದೆ.
ಈ ಸಂಬಂಧ ಇಂದು ಮೇಯರ್ ಗೌತಮ್ ಕುಮಾರ್, ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ , ಹಾಗೂ ಬಿಬಿಎಂಪಿ ಅಧಿಕಾರಿಗಳು ಮೇಲ್ಸೇತುವೆ ಪರಿಶೀಲನೆ ನಡೆಸಿದ್ದು, ಬಳಿಕ ಬಿಬಿಎಂಪಿ ಆಯುಕ್ತರಾದ ಅನಿಲ್ ಕುಮಾರ್ ಮಾತನಾಡಿ , ಸುಮನಹಳ್ಳಿ ಮೇಲ್ಸೇತುವೆ ಕುಸಿತಕ್ಕೆ ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣ ಎಂದು ಒಪ್ಪಿಕೊಂಡರು. ಬಿಡಿಎ 2016 ರಲ್ಲಿ ಈ ಮೇಲ್ಸೇತುವೆಯನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಿದೆ. ಆದರೆ ಬಿಬಿಎಂಪಿ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಬಿಬಿಎಂಪಿಯಲ್ಲಿ ಹೊಸ ಕಾಮಗಾರಿಗಳಿಗೆ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ. ಆದರೆ ನಿರ್ವಹಣೆ ಬಗ್ಗೆ ಗಮನಹರಿಸುತ್ತಲೇ ಇಲ್ಲ. ಇನ್ನು ಹತ್ತು ದಿನಗಳ ಕಾಲ ರಿಪೇರಿ ಕಾರ್ಯ ನಡೆಯಲಿದೆ. ರಿಪೇರಿ ಕಾರ್ಯ ಮುಗಿಯುವವರೆಗೂ ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲ. ವಾಹನಗಳ ಓಡಾಟಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದರು.
ಬಳಿಕ ಮೇಯರ್ ಗೌತಮ್ ಕುಮಾರ್ ಮಾತನಾಡಿ, ಈ ಮೇಲ್ಸೇತುವೆ ಬಿಡಿಎಯಿಂದ 10 ವರ್ಷದ ಹಿಂದೆ ನಿರ್ಮಾಣವಾಗಿದೆ. ಚೆನ್ನೈ ಮೂಲದ ಕಂಪನಿ ಈ ಸೇತುವೆ ನಿರ್ಮಾಣ ಮಾಡಿತ್ತು. ಕಾಂಕ್ರೀಟ್ ಮಿಶ್ರಣದ ಸಮಸ್ಯೆ ಎಂದು ಗೊತ್ತಾಗಿದೆ. ಕಡಿಮೆ ಗುಣಮಟ್ಟದಲ್ಲಿ ರಸ್ತೆ ನಿರ್ಮಾಣ ಮಾಡಿದ್ದರಿಂದ ಬ್ರಿಡ್ಜ್ ಹಾನಿಯಾಗಿದೆ. ಇನ್ನು 19 ದಿನದಲ್ಲಿ ಕಾಮಗಾರಿ ಪೂರ್ತಿ ಮಾಡಲು ಆದೇಶ ನೀಡಲಾಗಿದೆ. ಕಳಪೆ ಕಾಮಗಾರಿ ಮಾಡಿರುವ ಅಧಿಕಾರಿಗಳ ಹಾಗೂ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.