ಬೆಂಗಳೂರು: ಜಗತ್ತನ್ನೇ ಬಿಟ್ಟೂ ಬಿಡದೇ ಕಾಡಿದ, ಇಂದಿಗೂ ಕಾಡುತ್ತಿರುವ ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ಮಟ್ಟಹಾಕಲು ಜನವರಿ 16ರಂದು ಇಡೀ ದೇಶದಾದ್ಯಂತ ದೊಡ್ಡ ಮಟ್ಟದ ಲಸಿಕಾ ಅಭಿಯಾನ ಪ್ರಾರಂಭಿಸಲಾಗಿದ್ದು, ಮೊದಲ ಹಂತವಾಗಿ ಆರೋಗ್ಯ ಕಾರ್ಯಕರ್ತರಿಗೆ ಈ ಲಸಿಕೆ ನೀಡಲಾಗಿತ್ತು. ಇದೀಗ ಮೊದಲ ಹಂತದ ಕೊರೊನಾ ವ್ಯಾಕ್ಸಿನೇಷನ್ಗೆ ಇಂದೇ ಕೊನೆ ದಿನವಾಗಿದ್ದು, 35 ದಿನಗಳ ಕಾಲ ವ್ಯಾಕ್ಸಿನೇಷನ್ಗೆ ಅವಕಾಶವಿದ್ದರೂ ವ್ಯಾಕ್ಸಿನ್ ಪಡೆದುಕೊಳ್ಳದ ಆರೋಗ್ಯ ಕಾರ್ಯಕರ್ತರಿಗೆ ಇಂದೇ ಡೆಡ್ ಲೈನ್ ನೀಡಲಾಗಿದೆ.
ರಾಜ್ಯದಲ್ಲಿ ಶೇ.51 ರಷ್ಟು ಆರೋಗ್ಯ ಕಾರ್ಯಕರ್ತರು ಮಾತ್ರ ಇದೂವರೆಗೂ ವ್ಯಾಕ್ಸಿನ್ ಪಡೆದಿದ್ದಾರೆ. ವ್ಯಾಕ್ಸಿನ್ ಪಡೆಯಲು ಹೆಸರು ನೋಂದಾಯಿಸಿದ್ದರೂ ಹಲವು ಆರೋಗ್ಯ ಕಾರ್ಯಕರ್ತರು ಈ ಲಸಿಕೆಯನ್ನು ಪಡೆಯಲು ಹಿಂದೇಟು ಹಾಕಿದ್ದಾರೆ. ರಾಜ್ಯದಲ್ಲಿ ವ್ಯಾಕ್ಸಿನೇಷನ್ಗೆ ಒಟ್ಟು 2,81,682 ಆರೋಗ್ಯ ಕಾರ್ಯಕರ್ತರು ಹೆಸರು ನೋಂದಾಯಿಸಿದ್ದು, ಈ ಪೈಕಿ 1,00,865 ಮಂದಿ ಮಾತ್ರ ವ್ಯಾಕ್ಸಿನ್ ಪಡೆದಿದ್ದಾರೆ.
ಕೊರೊನಾ ವ್ಯಾಕ್ಸಿನೇಷನ್ ಪಡೆಯುವದರಲ್ಲಿ ಬೆಂಗಳೂರು ಶೇ.36ರಷ್ಟು ಗುರಿ ತಲುಪುವ ಮೂಲಕ ಕಳಪೆ ಸಾಧನೆ ತೋರಿದ್ದು, ಶೇ.78 ರಷ್ಟು ಮಂದಿ ವ್ಯಾಕ್ಸಿನ್ ಪಡೆಯುವ ಮೂಲಕ ತುಮಕೂರು, ಚಿಕ್ಕಬಳ್ಳಾಪುರ ಟಾಪ್ ಜಿಲ್ಲೆಗಳ ಪಟ್ಟಿಯಲ್ಲಿವೆ.
ವಿವಿಧ ಜಿಲ್ಲೆಗಳಲ್ಲಿನ ವ್ಯಾಕ್ಸಿನೇಶನ್ ಪ್ರಮಾಣ ಇಂತಿದೆ:
ಶೇ.70ಕ್ಕಿಂತ ಹೆಚ್ಚು ಗುರಿ ತಲುಪಿದ ಜಿಲ್ಲೆಗಳು:
- ತುಮಕೂರು
- ಚಿಕ್ಕಬಳ್ಳಾಪುರ
- ಗದಗ
- ಮಂಡ್ಯ
- ಉತ್ತರ ಕನ್ನಡ
- ಚಾಮರಾಜನಗರ
ಶೇ.50ಕ್ಕಿಂತ ಹೆಚ್ಚು ಗುರಿ ತಲುಪಿದ ಜಿಲ್ಲೆಗಳು:
- ಬಳ್ಳಾರಿ
- ಬೆಳಗಾವಿ
- ಬೆಂಗಳೂರು ಗ್ರಾಮಾಂತರ
- ಬೀದರ್
- ಚಿಕ್ಕಮಗಳೂರು
- ಚಿತ್ರದುರ್ಗ
- ಹಾಸನ
- ಹಾವೇರಿ
- ಕಲಬುರಗಿ
- ಕೊಡಗು
- ಕೋಲಾರ
- ಮೈಸೂರು
- ರಾಯಚೂರು
- ರಾಮನಗರ
- ಶಿವಮೊಗ್ಗ
- ವಿಜಯಪುರ
- ಯಾದಗಿರಿ
- ಉಡುಪಿ
ಶೇ. 50ಕ್ಕಿಂತ ಕಡಿಮೆ ಗುರಿ ತಲುಪಿದ ಜಿಲ್ಲೆಗಳು:
- ಬೆಂಗಳೂರು ನಗರ
- ದಕ್ಷಿಣ ಕನ್ನಡ
- ಧಾರವಾಡ
- ಬಾಗಲಕೋಟೆ