ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಕೊರೊನಾ ಸೋಂಕಿತರ ಸಂಖ್ಯೆ 8 ಸಾವಿರ ಗಡಿದಾಟಿದ್ದು, ಇಂದು ಒಂದೇ ದಿನ 8642 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2,49,590ಕ್ಕೆ ಏರಿಕೆಯಾಗಿದೆ. 126 ಮಂದಿ ಕೊರೊನಾಗೆ ಬಲಿಯಾಗಿದ್ದು, 16 ಜನ ನಾನ್ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 4327 ಜನ ಸೋಂಕಿಗೆ ಬಲಿಯಾಗಿದ್ದಾರೆ. ಇಂದು 7201 ಜನರು ಗುಣಮುಖರಾಗಿದ್ದು, ಒಟ್ಟು 1,64,150 ಡಿಸ್ಚಾರ್ಜ್ ಆಗಿದ್ದಾರೆ.
ಒಟ್ಟಾರೆ ಖಚಿತ ಸೋಂಕಿತರ ಪೈಕಿ ಸದ್ಯ 81,097 ಸಕ್ರಿಯ ಪ್ರಕರಣಗಳು ನಿಗಧಿತ ಆಸ್ಪತ್ರೆಯಲ್ಲಿ ಇವೆ. ಇದೇ ಮೊದಲ ಬಾರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯು ಏರಿಕೆ ಆಗಿದ್ದು, 704 ಜನರು ಐಸಿಯುನಲ್ಲಿ ಇದ್ದಾರೆ. ಹೋಮ್ ಕ್ವಾರಂಟೈನ್ನಲ್ಲಿ 3,26,591 ಮಂದಿ ಇದ್ದಾರೆ.
ಕೊರೊನಾಘಾತ:
- ಮಾರ್ಚ್-8 - ಮೊದಲ ಪ್ರಕರಣ
- ಜೂನ್- 24 - 10,000 ಪ್ರಕರಣ
- ಜುಲೈ- 06- 25,000 ಪ್ರಕರಣ
- ಜುಲೈ- 16 - 50,000 ಪ್ರಕರಣ
- ಜುಲೈ- 27 - 1ಲಕ್ಷ ಪ್ರಕರಣ
- ಆಗಸ್ಟ್- 13- 2 ಲಕ್ಷ ಪ್ರಕರಣ
ಕಿಮ್ಸ್ ಆಡಳಿತಾಧಿಕಾರಿ ಅಮಾನತು:
ಕಿಮ್ಸ್ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ವಿನೋದ್ ಅವರನ್ನು ಅಮಾನತು ಮಾಡಿ ನೂತನ ಆಡಳಿತ ಅಧಿಕಾರಿಯಾಗಿ ಡಾ.ಮುರುಳಿ ಅವರನ್ನು ನೇಮಕ ಮಾಡಲಾಗಿದೆ. ಇತ್ತೀಚಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾದ ಹಿನ್ನೆಲೆ 350 ರೋಗಿಗಳು ಪರದಾಟಪಟ್ಟರು. ಅಲ್ಲದೇ ತೀರಾ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ನಗರದಲ್ಲಿರುವ ಬೇರೆ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಯಿತು. ಜೊತೆಗೆ ಡಾ. ವಿನೋದ್ ವಿರುದ್ಧ ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ಕೀಳಾಗಿ ನಡೆಸಿಕೊಂಡ ಆರೋಪವೂ ಕೇಳಿಬಂದಿತ್ತು. ಜೊತೆಗೆ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆ ಅವರನ್ನ ಆ ಹುದ್ದೆಯಿಂದ ಇಳಿಸಲಾಗಿದೆ.
ಬೆಂಗಳೂರಿನಲ್ಲಿ ಸೋಂಕಿತರ ಮರಣ ಪ್ರಮಾಣ ಏರಿಕೆ:
ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ರೋಗಿಗಳ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇಂದು 56 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಜೊತೆಗೆ ಒಂದೇ ದಿನ 2804 ಮಂದಿಯಲ್ಲಿ ಸೋಂಕು ಕಂಡುಬಂದಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 96910ಕ್ಕೆ ಏರಿಕೆಯಾಗಿದೆ. 2549 ಮಂದಿ ಗುಣಮುಖರಾಗಿದ್ದು, 33280 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 62,041 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 1588ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸೋಂಕಿತರ ಪರೀಕ್ಷೆ ದಿನಕ್ಕೆ 25,000ಕ್ಕೆ ಏರಿಕೆಯಾಗಿದೆ.